ಕುಂದಾಪುರ : ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದಂತೆಯೇ ಜೀವನದಲ್ಲಿ ಆರ್ಥಿಕ ಆರೋಗ್ಯವೂ ಮುಖ್ಯ. ತಮ್ಮ ಆರ್ಥಿಕ ಸ್ಥಿತಿಗತಿಯ ಆರೋಗ್ಯವನ್ನು ನಿಗದಿತವಾಗಿ ಪರೀಕ್ಷಿಸುತ್ತಾ, ಅಭಿವೃದ್ಧಿಪಡಿಸಿಕೊಳ್ಳುತ್ತಿರಬೇಕು. ಆರ್ಥಿಕವಾಗಿ ಸಬಲತೆ ಹೊಂದಲು ಮ್ಯೂಚುವಲ್ ಫಂಡ್ ಗಳು ಅತ್ಯುತ್ತಮ ಮಾರ್ಗ. ಯಾಕೆಂದರೆ, ಇದರಲ್ಲಿ ಪ್ರತಿಯೊಬ್ಬರಿಗೂ ಸರಿಹೊಂದುವ ಉಳಿತಾಯ ಯೋಜನೆಗಳಿವೆ ಮತ್ತು ಮ್ಯೂಚುವಲ್ ಫಂಡ್ ಸಂಸ್ಥೆಗಳು ಲಾಭದ ಉದ್ದೇಶ ಹೊಂದಿಲ್ಲ ಎಂದು ಆರ್ಥಿಕ ತಜ್ಞ, ಯು ಟಿ ಐ ಮ್ಯೂಚುವಲ್ ಫಂಡ್ ಸಂಸ್ಥೆಯ ಮಂಗಳೂರು ವಿಭಾಗದ ಅಧಿಕಾರಿ ರವೀಂದ್ರ ಕುಲಕರ್ಣಿ ಹೇಳಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಗುಡ್ಡಟ್ಟು ವಲಯದ ವಾರ್ಷಿಕ ಅಧಿವೇಶನ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಹಣ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದರು.
ಮ್ಯೂಚುವಲ್ ಫಂಡ್ ಸಂಸ್ಥೆಗಳು ಸೆಬಿ ನಿಯಂತ್ರಣದಲ್ಲಿರುವುದರಿಂದ ಹೂಡಿಕೆಯ ಭದ್ರತೆಗೆ ಮೋಸವಿಲ್ಲ. ಇದರಲ್ಲಿ ಹೂಡಿಕೆ ಮಾಡಿ ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ ಗಳಿಸುವುದು ಸಾಧ್ಯ. ಹೂಡಿಕೆದಾರರಿಗೆ ಪ್ರತಿದಿನ ಅವರ ಹಣದ ಬೆಳವಣಿಗೆಯ ಸ್ಥಿತಿಗತಿ ಒದಗಿಸಲಾಗುತ್ತದೆ. ಇಲ್ಲಿ ಸಣ್ಣ ಮೊತ್ತವನ್ನು ಕೂಡಾ ಹೂಡಿಕೆ ಮಾಡಬಹುದು. ಬ್ಯಾಂಕ್ ಠೇವಣಿ ಬಡ್ಡಿ ಕಡಿಮೆ ಎಂಬ ಅಸಮಾಧಾನ, ಷೇರು ಮಾರುಕಟ್ಟೆಯ ಭಯ ಇರುವವರಿಗೆ ತಮ್ಮ ಕಷ್ಟಾರ್ಜಿತವನ್ನು ಹೂಡಿಕೆ ಮಾಡಿ ಲಾಭ ಗಳಿಸಲು ಮ್ಯೂಚುವಲ್ ಫಂಡ್ ಅತ್ಯಂತ ಒಳ್ಳೆಯ ಆಯ್ಕೆ’ ಎಂದವರು ವಿವರಿಸಿದರು.
ಸಮಾವೇಶವನ್ನು ತಾಲೂಕು ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಎಚ್. ರಾಘವೇಂದ್ರ ಅಡಿಗ – ಪವಿತ್ರಾ ಅಡಿಗ ದಂಪತಿ ಜಂಟಿಯಾಗಿ ಉದ್ಘಾಟಿಸಿ ಶುಭ ಕೋರಿದರು.
ಗುಡ್ಡಟ್ಟು ವಲಯಾಧ್ಯಕ್ಷ ಕೆ. ರಾಜಶೇಖರ ಉಪಾಧ್ಯಾಯ ಸಭಾಧ್ಯಕ್ಷತೆ ವಹಿಸಿದ್ದು, ಬ್ರಾಹ್ಮಣರು ಕೇವಲ ವಿದ್ಯೆ, ಜ್ಞಾನ, ಸಂಸ್ಕಾರಗಳಿಂದ ಮಾತ್ರವಲ್ಲದೆ ಆರ್ಥಿಕವಾಗಿಯೂ ಸದೃಢರಾಗಬೇಕು. ಈ ನಿಟ್ಟಿನಲ್ಲಿ ಹೂಡಿಕೆಯ ಸುರಕ್ಷಿತ ವಿಧಾನಗಳನ್ನು ಅರಿತು ಆದಷ್ಟು ಎಳವೆಯಲ್ಲೇ ಹೂಡಿಕೆ ಮಾಡಿ ಔನ್ನತ್ಯ ಹೊಂದಬೇಕು ಎಂದು ಸಲಹೆ ಮಾಡಿದರು. ಆದ್ದರಿಂದಲೇ ಸಂಸ್ಕೃತಿ – ಸಂಸ್ಕಾರಗಳನ್ನು ಪರಿಚಯಿಸುವ ಕಾರ್ಯದೊಂದಿಗೆ ವಲಯವು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ಅಳವಡಿಸಿಕೊಂಡಿದೆ ಎಂದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಅನಂತ ಪದ್ಮನಾಭ ಬಾಯಿರಿ,
ಗುಡ್ಡಟ್ಟು ವಲಯ ಗೌರವಾಧ್ಯಕ್ಷ ಎನ್. ಸತೀಶ್ ಅಡಿಗ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಎಸ್. ಕೊಡ್ಲಾಯ, ಕಾರ್ಯದರ್ಶಿ ವಿನಾಯಕ ಅಡಿಗ, ಖಜಾಂಚಿ ಎನ್. ಸತೀಶ್ ಕೊಡ್ಲಾಯ, ಯುವ ವಿಪ್ರ ವೇದಿಕೆ ಅಧ್ಯಕ್ಷ ಶ್ರೀಧರ ಉಡುಪ ಮತ್ತು ಮಹಿಳಾ ಘಟಕ ಗೌರವಾಧ್ಯಕ್ಷೆ ಸಂಧ್ಯಾ ಎಸ್. ಅಡಿಗ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಗುಡ್ಡಟ್ಟು ಶ್ರೀ ವಿನಾಯಕ ದೇವಾಲಯದ ಅನುವಂಶಿಕ ಆಡಳಿತ ಧರ್ಮದರ್ಶಿ ಅನಂತಪದ್ಮನಾಭ ಅಡಿಗ – ಸುಶೀಲಾ ದಂಪತಿ, ಪ್ರಗತಿಪರ ಕೃಷಿಕ ಬಿ. ಎಸ್. ಚಂದ್ರಶೇಖರ ಶಾಸ್ತ್ರಿ – ನಿರ್ಮಲಾ ದಂಪತಿ, ಹೈನುಗಾರ ಎಸ್. ರಾಮಕೃಷ್ಣ ಅಡಿಗ – ಯಶೋದಾ ದಂಪತಿ ಮತ್ತು ಹಾರ್ದಳ್ಳಿ – ಮಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸೂರ್ಯನಾರಾಯಣ ಉಡುಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿನಾಯಕ ಅಡಿಗ, ಮಾಧವಿ ಅಡಿಗ, ಅಕ್ಷತಾ ಅಡಿಗ ಮತ್ತು ಸತೀಶ್ ಅಡಿಗ ಪರಿಚಯಿಸಿದರು.
ವಿನಾಯಕ ಅಡಿಗ ಮತ್ತು ಶ್ರೀಧರ ಉಡುಪ ಆರಂಭದಲ್ಲಿ ವೇದ ಘೋಷ ಮಾಡಿದರು. ಸುಶೀಲಾ ಆರ್. ಉಪಾಧ್ಯಾಯ ಮತ್ತು ಆತ್ಮಿಕಾ ಉಪಾಧ್ಯಾಯ ಪ್ರಾರ್ಥಿಸಿದರು.
ರಾಜ್ಯ ಸರ್ಕಾರದಿಂದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ನೀಡಲಾದ ಕೊರೊನಾ ಪರಿಹಾರದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ನಮಿತಾ ಮರ್ಡಿ ಸ್ವಾಗತಿಸಿದರು. ವಲಯ ಗೌರವಾಧ್ಯಕ್ಷ ಎನ್. ಸತೀಶ್ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವಿನಾಯಕ ಅಡಿಗ ವಾರ್ಷಿಕ ವರದಿ ಓದಿದರು. ಖಜಾಂಚಿ ಸತೀಶ್ ಕೊಡ್ಲಾಯ ಆಯ – ವ್ಯಯ ವರದಿ ಒಪ್ಪಿಸಿದರು.
ವಲಯದ ನೂತನ ಪದಾಧಿಕಾರಿಗಳ ಆಯ್ಕೆ ನಡೆದು, ಮುಂದಿನ ಎರಡು ವರ್ಷಗಳ ಅವಧಿಗಾಗಿ ನಾಗರಾಜ ಮಂಜ ಅಧ್ಯಕ್ಷರಾಗಿಯೂ, ಶ್ರೀಧರ ಉಡುಪ ಕಾರ್ಯದರ್ಶಿ, ಮಂಜುನಾಥ ಕಲ್ಕೂರ ಖಜಾಂಚಿ, ಮಹಿಳಾ ವೇದಿಕೆ ಅಧ್ಯಕ್ಷೆಯಾಗಿ ಇಂದಿರಾ ಉಡುಪ, ಕಾರ್ಯದರ್ಶಿಯಾಗಿ ಪ್ರತಿಮಾ ಮಿತ್ಯಂತ ಹಾಗೂ ಯುವ ವಿಪ್ರ ವೇದಿಕೆ ಅಧ್ಯಕ್ಷರಾಗಿ ರಾಜೇಂದ್ರ ಅಡಿಗರು ಸರ್ವಾನುಮತದಿಂದ ಆಯ್ಕೆಗೊಂಡರು. ನಿರ್ಗಮಿತ ಅಧ್ಯಕ್ಷ ರಾಜಶೇಖರ ಉಪಾಧ್ಯಾಯ – ಸುಶೀಲಾ ಆರ್. ಉಪಾಧ್ಯಾಯ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರತಿಮಾ ಅಡಿಗ ಮತ್ತು ಶೈಲಜಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಉಡುಪ ವಂದಿಸಿದರು. ನಂತರ ಹವ್ಯಾಸಿ ಕಲಾವಿದರಿಂದ “ದ್ರೌಪದಿ ಪ್ರತಾಪ” ಯಕ್ಷಗಾನ ನಡೆಯಿತು