ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು:ಶಾಸಕ ಕೆ.ಆರ್.ರಮೇಶ್ ಕುಮಾರ್.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳು ನಿಗದಿತ ಸಮಯದೊಳಗೆ ಮುಗಿಯಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಅಂತರ್ಜಲ ವೃದ್ಧಿಸಲು ಚೆಕ್ ಡ್ಯಾಂಗಳು ಸಹಾಯಕವಾಗುತ್ತವೆ. ಈಗಾಗಲೆ ನಿರ್ಮಿಸಲಾಗಿರುವ ಚೆಕ್ ಡ್ಯಾಂಗಳ ಪೈಕಿ ಸುಸ್ಥಿತಿಯಲ್ಲಿರುವ ಹಾಗೂ ದುರಸ್ತಿ ಅಗತ್ಯವಿರುವ ಚೆಕ್ ಡ್ಯಾಂಗಳ ಮಾಹಿತಿ ಒದಗಿಸಬೇಕು. ಕೃಷಿ, ತೋಟಗಾರಿಕೆ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಆಯಾ ಇಲಾಖೆಯಲ್ಲಿ ದೊರೆಯುವ ಸೌಲಭ್ಯ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ತಾಲ್ಲೂಕಿನ ಎಲ್ಲ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸಲಾಗುವುದು. ರಾಜ ಕಾಲುವೆಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳಿಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಮುಖಂಡರಾದ ದಿಂಬಾಲ ಅಶೋಕ್, ಎಂ.ಶ್ರೀನಿವಾಸನ್, ಎನ್.ಹನುಮೇಶ್, ಸಂಜಯ್ ರೆಡ್ಡಿ ಇದ್ದರು.