ಎಲ್ಲರೂ ಕೋವಿಡ್ ವಿರುದ್ಧ ಸಲಿಕೆ ಹಾಕಿಸಿಕೊಳ್ಳಬೇಕು. ವಿಶೇಷವಾಗಿ ಶಿಕ್ಷಕ ಸಮುದಾಯ : ಡಾ. ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಎಲ್ಲರೂ ಕೋವಿಡ್ ವಿರುದ್ಧ ಸಲಿಕೆ ಹಾಕಿಸಿಕೊಳ್ಳಬೇಕು. ವಿಶೇಷವಾಗಿ ಶಿಕ್ಷಕ ಸಮುದಾಯ ಕೋವಿಡ್ ಸೋಂಕು ಹರಡದಂತೆ ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯದ ವಿಐಪಿ ಶಾಲೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಾಲ್ಲೂಕಿನ ಅನುದಾನ ರಹಿತ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಸಕಾಲಿಕ ಕ್ರಮಗಳಿಂದಾಗಿ ಕೊರೊನಾ ನಿಯಂತ್ರಣದಲ್ಲಿದೆ. ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಶಿಕ್ಷಕರಿಗೆ ತಲಾ ರೂ.5 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ನೆರವಿನ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಶಿಕ್ಷಕರು ಸ್ವಾಭಿಮಾನಿಗಳು. ಅವರು ಕೈಯೊಡ್ಡಲು ಮುಂದಾಗುವುದಿಲ್ಲ. ಆದ್ದರಿಂದಲೇ ಸರ್ಕಾರ ಅನುದಾನ ರಹಿತ ಶಿಕ್ಷಕರ ನೆರವಿಗೆ ಧಾವಿಸಿದೆ. ಶಿಕ್ಷಣ ಸಂಸ್ಥೆಗಳು ಎಲ್ಲ ಅರ್ಹ ಶಿಕ್ಷಕರಿಗೂ ನೆರವು ದೊರೆಯುವಂತೆ ನೊಡಿಕೊಳ್ಳಬೇಕು. ಶಿಕ್ಷಣ ಇಲಾಖೆ ಅಧಿಕರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಹಿರಿದು. ರಾಜ್ಯದಲ್ಲಿ 32 ಸಾವಿರ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. 3 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 60 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಲಾಕ್ ಡೌನ್ ಹಾಗೂ ಕೊರೊನಾ ಸಂಕಷ್ಟ ಈ ಸಮುದಾಯವನ್ನು ಕಷ್ಟಕ್ಕೆ ನೂಕಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಬಿಗಿ ಕ್ರಮಗಳಿಂದಾಗಿ ಕೋವಿಡ್ ಹಾವಳಿ ಕಡಿಮೆಯಾಗಿದೆ. ರಾಜ್ಯದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಕಷ್ಟಕ್ಕೆ ಸ್ಪಂದಿಸಿ ವಿವಿಧ ಸಮುದಾಯದ ಬಡವರಿಗೆ ಪ್ಯಾಕೇಜ್ ಪ್ರಕಟಿಸಿ ನೆರವಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ. ಗೌಡ ಅವರು ಕೊರೊನಾ ಸಂಕಷ್ಟದಕೆ ಸ್ಪಂದಿಸಿ ವಿವಿಧ ನೆರವನ್ನು ನೀಡುತ್ತಿದ್ದಾರೆ. ಈಗ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.
ಮುಖಂಡರಾದ ಎ.ಅಶೋಕ್ ರೆಡ್ಡಿ, ಎಂ.ನಾಗರಾಜ್, ಜಯರಾಮರೆಡ್ಡಿ, ಕೆ.ಕೆ.ಮಂಜು, ಎಸ್.ವಿ.ಮುನಿವೆಂಕಟಪ್ಪ, ಜಿ.ಎನ್.ಗೋವಿಂದರೆಡ್ಡಿ, ರಾಮಕೃಷ್ಣ, ಬಿಇಒ ಉಮಾದೇವಿ, ಸುಬ್ರಮಣಿ, ಕಲಾ ಶಂಕರ್ ಇದ್ದರು
.