ಕೋವಿಡ್‍ಗೆ ಬಲಿಯಾದ ಅನ್ನದಾತನ ಕೈಹಿಡಿದ ರಾಜ್ಯ ಅಪೆಕ್ಸ್ ಬ್ಯಾಂಕ್ ಮೃತ ರೈತನ ಕುಟುಂಬಕ್ಕೆ ಪರಿಹಾರ ಘೋಷಣೆ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೋವಿಡ್-19ಕ್ಕೆ ಸಿಲುಕಿ ಜೀವ ತೆತ್ತ ರೈತರು ಡಿಸಿಸಿ ಬ್ಯಾಂಕ್ ಮತ್ತು ಬ್ಯಾಂಕ್ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ಬೆಳೆಸಾಲ ಮಾಡಿದ್ದರೆ ಅಂತಹ ಕುಟುಂಬಗಳಿಗೆ ಪರಿಹಾರ ಒದಗಿಸಲು ರಾಜ್ಯ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕರೂ ಹಾಗೂ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದ್ದಾರೆ.
ಶನಿವಾರ ಮೃತ ರೈತರ ಮಾಹಿತಿ ಸಂಗ್ರಹಿಸುವ ಸಂಬಂಧ ಕೋಲಾರ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಅವರು, ಅಫೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ರೈತರಿಗೆ ಈ ನೆರವು ನೀಡಲು ನಿರ್ಧರಿಸಿದ್ದು, ಸಾಲ ಪಡೆದು ಮೃತರಾಗಿರುವ ರೈತರ ಮಾಹಿತಿ ಸಂಗ್ರಹಿಸಿ ಬ್ಯಾಂಕಿನ ಕೇಂದ್ರ ಕಚೇರಿಗೆ ಜು.1 ರೊಳಗೆ ಸಲ್ಲಿಸಲು ಸೂಚಿಸಿದರು.


ಏಪ್ರಿಲ್-2020 ರಿಂದ ಜೂ.2021ಕ್ಕೆ ಪರಿಗಣನೆ


01-04-2020 ರಿಂದ 30-06-2021ರ ಈ ಅವಧಿಯಲ್ಲಿ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದು, ಕೋವಿಡ್‍ನಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಪರಿಹಾರ ಒದಗಿಸಲು ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಅಥವಾ ಬ್ಯಾಂಕಿನ ಆರ್ಥಿಕ ನೆರವಿನೊಂದಿಗೆ ಸೊಸೈಟಿಗಳಿಂದ ಬ್ಯಾಂಕ್ ನಿಗಧಿಪಡಿಸಿರುವ ಅವಧಿಯಲ್ಲಿ ಮತ್ತು ಕೃಷಿ ಭೂಮಿ ಪಹಣಿ ಅಡಮಾನವಿಟ್ಟು ಬೆಳೆಸಾಲ ಪಡೆದಿರುವ ರೈತ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಬಲಿಯಾಗಿದ್ದರೆ ಅಂತಹವರಿಗೆ ಮಾತ್ರ ಈ ಪರಿಹಾರದ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.
ಮೃತ ರೈತ ಕುಟುಂಬದಿಂದ ಪಡಿತರ ಚೀಟಿ, ಕೋವಿಡ್‍ನಿಂದ ಮೃತಪಟ್ಟ ದೃಢೀಕೃತ ಪ್ರಮಾಣ ಪತ್ರ, ಆಧಾರ್‍ಕಾರ್ಡ್,ಸಾಲ ಪಡೆದಿರುವ ದಾಖಲೆಗಳನ್ನು ಆಯಾ ವ್ಯಾಪ್ತಿಯ ಪ್ಯಾಕ್ಸ್‍ಗಳ ಕಾರ್ಯದರ್ಶಿಗಳೇ ಸಂಗ್ರಹಿಸಿ ಕೇಂದ್ರ ಕಚೇರಿಗೆ ಜು.1 ರೊಳಗೆ ಸಲ್ಲಿಸಲು ಸೂಚಿಸಿದರು.
ಇತರೆ ರೈತರು ಸಾಲ
ಪಾವತಿಗೆ ಸೂಚನೆ
ಕೋವಿಡ್‍ನಿಂದಾಗಿ ಸಾಲ ಮರುಪಾವತಿ 2 ತಿಂಗಳು ಸ್ಥಗಿತಗೊಂಡಿತ್ತು ಎಂದ ಅವರು, ಬಡ್ಡಿರಹಿತ ಸಾಲ ಪಡೆದಿರುವ ರೈತರು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸಾಲದ ಕಂತು ಮರುಪಾವತಿಸುವ ಮೂಲಕ ಬಡ್ಡಿಯ ಹೊರೆ ಬೀಳದಂತೆ ಎಚ್ಚರವಹಿಸಿ ಎಂದು ಕೋರಿದರು.
ರೈತರು,ಮಹಿಳೆಯರು ಪಡೆದ ಸಾಲವನ್ನು ಸಮಯಕ್ಕೆ ಮರುಪಾವತಿಸಿ ಬ್ಯಾಂಕಿನ ಘನತೆ ಹೆಚ್ಚಿಸಿದ್ದೀರಿ, ಇದೀಗ ಕೋವಿಡ್ ಸಂಕಷ್ಟದ ನಂತರವೂ ನೀವು ಬದ್ದತೆಯಿಂದ ಸಾಲ ಮರುಪಾವತಿಸಿ, ಅವಧಿ ಮೀರಿದರೆ ಬಡ್ಡಿಯ ಹೊರೆ ಬಿದ್ದೀತು ಎಂದರು.
ಡಿಸಿಸಿ ಬ್ಯಾಂಕ್ ರೈತರು, ತಾಯಂದಿರ ಹಿತ ರಕ್ಷಣೆಗೆ ಬದ್ದವಾಗಿದೆ, ನೀವೇ ಬೆಳೆಸಿರುವ ಬ್ಯಾಂಕನ್ನು ಉಳಿಸಿ ಬೆಳೆಸುವ ಹೊಣೆಯೂ ನಿಮ್ಮದೇ ಆಗಿದೆ, ಸಕಾಲಕ್ಕೆ ಸಾಲದ ಕಂತುಗಳನ್ನು ಮರುಪಾವತಿಸಿ ಎಂದು ಕಿವಿಮಾತು ಹೇಳಿದರು.
ಅಫೆಕ್ಸ್ ಬ್ಯಾಂಕಿನ
ನಿರ್ಧಾರಕ್ಕೆ ಸ್ವಾಗತ
ಬ್ಯಾಂಕಿನ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‍ಕುಮಾರ್, ಕೆ.ವಿ.ದಯಾನಂದ್ ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಫೆಕ್ಸ್ ಬ್ಯಾಂಕ್ ಉತ್ತಮ ನಿರ್ಧಾರ ಮಾಡಿದೆ, ಮೃತ ರೈತ ಕುಟುಂಬಗಳಿಗೆ ನೆರವಾಗುವ ಮೂಲಕ ಅನ್ನದಾತನ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಇಡೀ ವಿಶ್ವವನ್ನೇ ಕೋವಿಡ್ ಕಾಡಿದೆ, ಅನ್ನದಾತ ಬೆಳೆದ ಬೆಳೆಗಳಿಗೂ ಬೆಲೆ ಇಲ್ಲದೇ ನೋವುಂಡಿದ್ದಾನೆ, ಕಷ್ಟಪಟ್ಟು ದುಡಿಯುವ ವ್ಯಕ್ತಿಯೇ ಮನೆಯಲ್ಲಿ ಕೋವಿಡ್‍ಗೆ ಬಲಿಯಾದರೆ ಆ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ, ಇಂತಹ ಸಂದರ್ಭದಲ್ಲಿ ಅನ್ನದಾತನ ನೆರವಿಗೆ ನಿಲ್ಲುವ ದಿಟ್ಟ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ಎಜಿಎಂ ಖಲೀಮುಲ್ಲಾ, ಬ್ಯಾಂಕಿನ ಅಧಿಕಾರಿಗಳಾದ ತಿಮ್ಮಯ್ಯ, ಶುಭಾ,ಮಮತಾ,ಬಾಲಾಜಿ ಮತ್ತಿತರರಿದ್ದರು.