ಜೆಡಿಎಸ್‍ಗೆ ಅಧಿಕಾರ ನೀಡಿದರೆ ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸುವೆವು ಎಚ್.ಡಿ.ಕುಮಾರಸ್ವಾಮಿ ಭರವಸೆ

ಕೋಲಾರ:- ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜನ ಜೆಡಿಎಸ್‍ಗೆ ಅಧಿಕಾರ ನೀಡಿದರೆ ಕೋವಿಡ್ ಸಂಕಷ್ಟದಲ್ಲಿ ಜನರ ಜೀವ ರಕ್ಷಣೆಗೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ನಗರ ಹೊರವಲಯದ ನಾರಾಯಣಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಆಶಾಕಾರ್ಯಕರ್ತೆಯರು, 108 ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ವಿಕಲಚೇತನರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಆಶಾ ಕಾರ್ಯಕರ್ತೆಯರು ಬೇಡಿಕೆಗಳನ್ನು ಈಡೇರಿಸುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದಿರಿ, ನಿಮ್ಮ ಬೇಡಿಕೆ ಈಡೇರಿಕೆಗೆ ನಾನು 2018 ಚಿಂತನೆ ಮಾಡಿದ್ದೆ ಆದರೆ ಆಗ ನನ್ನ ಮುಂದೆ ರೈತರ ಸಾಲ ಮನ್ನಾ ಮಾಡುವ ಬದ್ದತೆ, ಆಲೋಚನೆ ಇದ್ದುದರಿಂದ ಆ ಕಾರ್ಯ ಮಾಡಿದೆ ಆದರೆ ನಿಮ್ಮ ಬೇಡಿಕೆ ಈಡೇರಿಸಲು ಆಗಲಿಲ್ಲ ಎಂದು ವಿಷಾದಿಸಿದರು.
ಮುಂದಿನ ದಿನಗಳಲ್ಲಿ ಒಳ್ಳೆಯ ಸರ್ಕಾರವನ್ನು ರಾಜ್ಯದ ಜನ ಆಯ್ಕೆ ಮಾಡಿದರೆ ನೀವು ಬೀದಿಗೆ ಇಳಿದು ಹೋರಾಟ ಮಾಡುವುದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ, ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ವಿಶ್ವದಲ್ಲಿ ಕೊರೊನಾ ವ್ಯಾಪಿಸಿದೆ. ಜನರ ಬದುಕಿಗೆ ರಕ್ಷಣೆ ನೀಡುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದು ಅವರಿಗೆ ಗೌರವ ಕೊಡುವ ಕೆಲಸವನ್ನು ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂತ್ರಸ್ಥರಿಗೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ 4 ಸಾವಿರ ಔಷಧಿ ಕಿಟ್ ಗಳನ್ನು ನೀಡಿರುವುದು ಶ್ಲಾಘನೀಯ ಎಂದ ಅವರು, ಸಂಕಷ್ಟದಲ್ಲಿ ಇರುವವರ ನೆರವಿಗೆ ಪಕ್ಷದ ಕಾರ್ಯಕರ್ತರು,ಮುಖಂಡರು ನಿಂತಿದ್ದಾರೆ ಎಂದರು.
2ನೇ ಅಲೆಯಲ್ಲಿ
ಸರ್ಕಾರ ಎಡವಿದೆ
ಕೋವಿಡ್ ಮೊದಲ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಸರ್ಕಾರ 2ನೇ ಅಲೆಯಲ್ಲಿ ಎಡವಿದೆ, ಇಂತಹ ಸಂದರ್ಭದಲ್ಲೂ ಕೊರೋನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ, ಅವರಿಗೆ ಪ್ರತಿಯೊಬ್ಬರೂ ಋಣಿಯಾಗಿರಬೇಕು ಎಂದರು.
ರಾಷ್ಟ್ರ, ವಿಶ್ವದಲ್ಲಿ ಕೋವಿಡ್ 2ನೇ ಅಲೆಯಿದ್ದು ಸಾವು ನೋವುಗಳು ಸಂಭವಿಸಿವೆ. ಇಂದಿನ ಈ ಪರಿಸ್ಥಿಯಲ್ಲಿ ಕೊರೊನಾ ವಾರಿಯರ್ಸ್ ಸೇವೆ ಶ್ಲಾಘನೀಯ. ಅನೇಕ ಜಾಗೃತಿ ಕೆಲಸಗಳನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದೀರಿ, ಜನತೆಯಲ್ಲಿ ಜಾಗೃತಿ ಮೂಡಿಸಿದ್ದೀರಿ ಎಂದರು.
ವಾರಿಯರ್ಸ್‍ಗೆ ನೆರವಾಗುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕೊರೊನಾದಿಂದ ಸಾವು-ನೋವು ಅನುಭವಿಸಿರುವ ಕುಟುಂಬಗಳಿಗೆ ಮತ್ತಷ್ಟು ಸೇವೆ ಸಲ್ಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್‍ಕುಮಾರಸ್ವಾಮಿ ಮಾತನಾಡಿ,ಕೋವಿಡ್‍ನಲ್ಲೆ ಅನೇಕರನ್ನು ಕಳೆದುಕೊಂಡಿದ್ದೇವೆ, ಆಕ್ಸಿಜನ್,ಬೆಡ್ ಸಮಸ್ಯೆ ಕಂಡಿದ್ದೇವೆ, ಸದ್ಯ ರೋಗ ತಹಬಂದಿಗೆ ಬಂದಿದ್ದು, ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಅನೇಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಕೂಲಿ ಕಾರ್ಮಿಕರು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಅನೇಕ ಕಡೆಗಳಲ್ಲಿ ಜನರ ಕೈಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದಾನಿಗಳು ನೀಡಿದ್ದ ಆಕ್ಸಿಜನ್ ಸಾಂಧ್ರಕಗಳನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಹಸ್ತಾಂತರ ಮಾಡಲಾಯಿತು. ವಿಕಲಚೇತನರು, ಆಶಾ ಕಾರ್ಯಕರ್ತೆಯರು, 108 ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಲಾಯಿತು.
ವೇದಿಕೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ,ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ರಮೇಶ್, ನಗರಸಭೆ ಅಧ್ಯಕ್ಷೆ ಶ್ವೇತಾ, ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಮಾಜಿ ಎಂಎಲ್ ಸಿ ತೂಪಲ್ಲಿ ಚೌಡರೆಡ್ಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಸಮೃದ್ಧಿ ಮಂಜು, ಮಲ್ಲೇಶ್ ಬಾಬು, ಕಿತ್ತಂಡೂರು ನಂಜುಂಡಪ್ಪ, ಸಮಾಜ ಸೇವಕ ಸಿಎಂಆರ್ ಶ್ರೀನಾಥ್, ಕುರಬೂರು ಶಂಕರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ ಮತ್ತಿತರರಿದ್ದರು
.