ಕೋಲಾರ ; ಬೂದಿಕೋಟೆ ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು :ಸಚಿವ ಎಸ್. ಅಂಗಾರ

ಕೋಲಾರ ; ಬೂದಿಕೋಟೆ ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ತಿಳಿಸಿದರು.

ಇಂದು ಬೂದಿಕೋಟೆಯ ಮಾರ್ಕಂಡೇಯ ಡ್ಯಾಮ್ ಮತ್ತು ಮಾಕರ್ಂಡೇಯ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿ ಶ್ರೀಘ್ರದಲ್ಲೇ ವರುಣನ ಕೃಪೆಯಿಂದ ಹಾಗೂ ಕೆಸಿ ವ್ಯಾಲಿ ನೀರಿನಿಂದ ಮಾಕರ್ಂಡೇಯ ಡ್ಯಾಮನ್ನು ತುಂಬಿಸಲಾಗುವುದು ಎಂದು ತಿಳಿಸಿದರು.

ಮೀನುಮರಿ ಉತ್ಪಾದನೆ ಮತ್ತು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಮೀನುಮರಿ ಉತ್ಪಾದನೆಯಲ್ಲಿ ಕರಾವಳಿ ಮತ್ತು ಒಳನಾಡು ಎಂದು ಎರಡು ವಿಧವಾಗಿ ಉತ್ಪಾದಿಸಲಾಗುತ್ತದೆ. ಒಳನಾಡು ಮೀನುಮರಿ ಉತ್ಪಾದನೆಯಲ್ಲಿ ಯಾವ ತಳಿ ಮೀನುಮರಿಗಳನ್ನು ಉತ್ಪಾದಿಸಬಹುದು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ಕರಾವಳಿ ಮೀನಿನ ಬೇಡಿಕೆ ಹೆಚ್ಚಾಗಿದೆ ಆದ್ದರಿಂದ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಮೀನುಗಳನ್ನು ಮಾರಾಟಮಾಡಲು ಹಾಗೂ ಮೀನುಗಾರರಿಗೆ ಅನುಕೂಲವಾಗುವಂತೆ ಶೀತಲ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಕೆರೆಗಳಿವೆ. ಕೆಸಿ ವ್ಯಾಲಿ ನೀರಿನಿಂದ ಅನೇಕ ಕೆರೆಗಳು ತುಂಬಿವೆ. ಮಳೆಯು ಚೆನ್ನಾಗಿ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ, ಜನರಿಗೆ ಹಾಗೂ ಸರ್ಕಾರಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಮೀನು ಸಾಕಾಣಿಕೆ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಚಿವರಲ್ಲಿ ಮನವಿ ಮಾಡಿದರು.

ಕರೋನಾ ಸಂದರ್ಭದಲ್ಲಿ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಿರುವವರಿಗೆ ಮೀನು ಮಾರಾಟ ಮಾಡಲು ಇನ್ನೂ ಸ್ವಲ್ಪ ದಿನ ಕಾಲಾವಕಾಶ ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮಾಕರ್ಂಡೇಯ ಡ್ಯಾಮನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿನ ಗತವೈಭವ ಮರುಕಳಿಸಲಿದೆ. ಎಲ್ಲರೂ ಒಟ್ಟಾಗಿ ಸೇರಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಹೇಶ್, ಜಿಲ್ಲಾ ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ಡಾ|| ಸಿ.ಎಸ್.ಅನಂತ, ಬೇತಮಂಗಲ ಮೀನುಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಲಕ್ಷ್ಮಿಕಾಂತ್, ಶ್ರೀನಿವಾಸಪುರದ ಮೀನುಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಮಾನಯ್ಯ, ಮಾರ್ಕಂಡೇಯ ಮೀನು ಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಸತೀಶ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜವರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.