ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಸೌಲಭ್ಯ ನೀಡಲಾಗುವುದು : ಸಮಾಜ ಸೇವಕ ಬಿ.ವಿ.ಶಿವಾರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಸೌಲಭ್ಯ ನೀಡಲಾಗುವುದು ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಬಿ.ವಿ.ಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ 10 ಆಮ್ಲಜನಕ ಸಿಲಿಂಡರ್‍ಗಳನ್ನು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಷರೀಫ್ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಗಡಿ ಗ್ರಾಮದ ಆಸ್ಪತ್ರೆಗೆ ಬರುವ ಕೋವಿಡ್ ಪೀಡಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ. ಗಡಿ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಬಡವರಿದ್ದಾರೆ. ಅವರು ದೂರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶಕ್ತರಾಗಿಲ್ಲ. ಅಂಥ ವ್ಯಕ್ತಿಗಳ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಈಗ 30 ಹಾಸಿಗೆಗೆ ಸಾಕಾಗುವಷ್ಟು ಆಮ್ಲಜನಕ ಒದಗಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಪ್ರಾರಂಭಕ್ಕೆ ಕೋವಿಡ್ ಪೀಡಿತರ ಚಿಕಿತ್ಸೆಗಾಗಿ 8 ಹಾಸಿಗಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಎಷ್ಟೇ ಹಾಸಿಗೆ ಸೌಲಭ್ಯ ಒದಗಿಸಿದರೂ, ಅಗ್ಯವಾದ ಆಮ್ಲಜನಕದ ಸಿಲಿಂಡರ್‍ಗಳನ್ನು ನೀಡಲಾಗುವುದು. ಇಷ್ಟು ಮಾತ್ರವಲ್ಲದೆ ಹೋಂ ಕ್ವಾರಂಟೈನ್‍ನಲ್ಲಿರುವ ಬಡ ಕೋವಿಡ್ ರೋಗಿಗಳಿಗೆ ಅಗತ್ಯವಾದ ಔಷಧಗಳನ್ನು ಪೂರೈಸಲಾಗುವುದು. ಸೋಂಕಿತರು ಹಾಗೂ ಆಸ್ಪತ್ರೆಗೆ ಯಾವುದೇ ಸೌಲಭ್ಯ ಬೇಕಿದ್ದರೂ ಕೇಳಿ ಪಡೆಯಬಹುದಾಗಿದೆ ಎಂದು ಹೇಳಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಷರೀಫ್, ಮುಖಂಡರಾದ ಬಕ್ಷುಸಾಬ್, ಶೇಷಾದ್ರಿ, ರಾಮ್ ಮೋಹನ್, ಅನಿಲ್, ವಿ.ಕೆ.ನಾಗರಾಜ್, ಅಬ್ಬು, ರೆಡ್ಡಪ್ಪ, ಪ್ರಶಾಂತ್, ಮಹೇಶ್, ಕಾರ್ತಿಕ್ ರೆಡ್ಡಿ ಇದ್ದರು
.