ಜಿಲ್ಲಾ ನೌಕರರ ಸಂಘದ ಅಧ್ಯಕ್ಷಗಿರಿಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಅನಗತ್ಯ ಹೇಳಿಕೆಗಳ ವಿರುದ್ದ ಶಿಸ್ತುಕ್ರಮದ ಸಂದೇಶ ನೀಡಿದ ಷಡಕ್ಷರಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷಗಿರಿಗೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿರುವ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು, ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಸಂಘಟನೆಗೆ ಹಿನ್ನಡೆಯುಂಟು ಮಾಡಿದ್ದ ಕೆಲವರಿಗೆ ಶಿಸ್ತುಕ್ರಮದ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ರಾಜ್ಯಾಧ್ಯಕ್ಷರು,ಪ್ರಧಾನಕಾರ್ಯದರ್ಶಿ,ಖಜಾಂಚಿಯವರ ಸಮಕ್ಷಮದಲ್ಲಿ ಕಳೆದ ಜ.12 ರಂದು ನಡೆದ ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಬೈಲಾ ನಿಯಮಗಳನ್ವಯ ಹಾಜರಿದ್ದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಜಿ.ಸುರೇಶ್‍ಬಾಬು ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಉಳಿದ ಅವಧಿಗೆ ಆಯ್ಕೆ ಮಾಡುವ ಮೂಲಕ ಸಭಾ ನಡವಳಿಯಲ್ಲಿ ದಾಖಲು ಮಾಡಲಾಗಿದೆ ಎಂಬುದನ್ನು ಅಧ್ಯಕ್ಷರಾದ ಷಡಕ್ಷರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ್ ಜಂಟಿಯಾಗಿ ನೀಡಿರುವ ಪತ್ರದಲ್ಲಿ ಸ್ವಷ್ಟೀಕರಿಸಿದ್ದಾರೆ.
ಆದರೆ ಜಿಲ್ಲೆಯ ಸಂಘದ ಒಂದಿಬ್ಬರು ನಿರ್ದೇಶಕರು ಅಧ್ಯಕ್ಷರ ಹುದ್ದೆ ಕುರಿತು ಗೊಂದಲ ಸೃಷ್ಟಿಸಿ ಈ ಸಂಬಂಧ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಅನಗತ್ಯ ಪ್ರಸ್ತಾಪ ಮಾಡುವ ಮೂಲಕ ಸಂಘದ ಸಂಘಟನೆಗೆ ಮುಜುಗರವುಂಟು ಮಾಡುತ್ತಿರುವುದನ್ನು ಮನಗಂಡು ಷಡಕ್ಷರಿ ಈ ಸ್ವಷ್ಟನೆ ನೀಡಿರುವುದಾಗಿ ತಿಳಿಸಿದ್ದಾರೆ.
ಸಂಘದ ಬೈಲಾ ನಿಯಮದಲ್ಲಿ ಸಂಘದ ಕಾರ್ಯಚಟುವಟಿಕೆಗಳ ಕುರಿತಂತೆ ಜಿಲ್ಲಾಧ್ಯಕ್ಷರು,ತಾಲ್ಲೂಕು ಅಧ್ಯಕ್ಷರು ಹಾಗೂ ಯೋಜನಾ ಶಾಖೆಗಳ ಅಧ್ಯಕ್ಷರು ಪತ್ರಿಕಾ ಹೇಳಿಕೆ ಅಥವಾ ಪ್ರಕಟಣೆ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸ್ವಷ್ಟಪಡಿಸಿದ್ದಾರೆ.
ಉಳಿದ ಪದಾಧಿಕಾರಿ,ನಿರ್ದೇಶಕರು ಹಾಗೂ ಸರ್ಕಾರಿ ನೌಕರರು ಸಂಘಕ್ಕೆ ಸಂಬಂಧಿಸಿದ ಪತ್ರಿಕಾ ಹೇಳಿಕೆ,ಪ್ರಕಟಣೆಗಳನ್ನು ಬಿಡುಗಡೆ ಮಾಡಲು ಅವಕಾಶವನ್ನು ಬೈಲಾ ಕಲ್ಪಿಸಿಲ್ಲ ಎಂದು ತಿಳಿಸಿದ್ದಾರೆ.
ಸಂಘಟನೆಗೆ ಮುಜುಗರವಾಗುವಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮದ ಮುಂದೆಯಾಗಲಿ ಹಂಚಿಕೊಳ್ಳುವುದು ಸಂಘ ವಿರೋಧಿ ಚಟುವಟಿಕೆಯಾಗುವುದರಿಂದ ಇದು ಬೈಲಾ ಉಲ್ಲಂಘನೆಯಾಗಿದ್ದು, ಅಂತಹವರ ವಿರುದ್ದ ಶಿಸ್ತುಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯ ಸಂಘ,ಸಂಘಟನೆಗೆ ಸಂಬಂಧಿಸಿದ ಯಾವುದೇ ಗೊಂದಲಗಳು ಉದ್ಬವಿಸಿದ್ದಲ್ಲಿ ರಾಜ್ಯ ಸಂಘವನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಸೂಚಿಸಿದ್ದಾರೆ.
ಈ ಸ್ವಷ್ಟನೆಯ ನಡುವೆಯೂ ರಾಜ್ಯ,ಜಿಲ್ಲಾ,ತಾಲ್ಲೂಕು,ಯೋಜನಾ ಶಾಖೆಯ ಪದಾಧಿಕಾರಿಗಳು, ಸದಸ್ಯರು ಸಂಘದ ಸಂಘಟನೆಗೆ ಹಿನ್ನಡೆಯಾಗುವಂತಹ ಹೇಳಿಕೆ,ಪ್ರಕಟಣೆಗಳನ್ನು ಸಾಮಾಜಿಕ ಜಾಲತಾಣ,ಪತ್ರಿಕೆಗಳಲ್ಲಿ ಹಂಚಿಕೊಂಡರೆ ಅದು ಶಿಸ್ತುಕ್ರಮಕ್ಕೆ ಅರ್ಹವಾಗುತ್ತದೆ ಆದ್ದರಿಂದ ಅಂತಹವರ ವಿರುದ್ದ ನೌಕರರ ಸಂಘದ ಉಪವಿಧಿಗಳು-2020 ನಿಯಮ 24 (ಎಫ್)8(2)(ಎ)ಅನ್ವಯ ಶಿಸ್ತುಕ್ರಮ ಜರುಗಿಸಲಾಗುವುದು ಎಂದು
ಎಚ್ಚರಿಕೆ ನೀಡಿದ್ದಾರೆ.


ಸಂಘ ಮುನ್ನಡೆಸುವ ಹೊಣೆ ಸುರೇಶ್‍ಬಾಬುಗೆ


ಈಗಾಗಲೇ ಕಳೆದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡು ನಿದ್ರಾವಸ್ಥೆಗೆ ಜಾರಿದ್ದ ಸಂಘಟನೆಯನ್ನು ಕ್ರಿಯಾಶೀಲಗೊಳಿಸಿ, ನೌಕರರ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸುರೇಶ್‍ಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಸಿ, ಪ್ರಾಥಮಿಕ ಶಿಕ್ಷಕರ ಸಂಘವೂ ನೌಕರರ ಸಂಘದ ಭಾಗ ಎಂಬುದನ್ನು ತೋರಿಸಿಕೊಟ್ಟಿದ್ದರು.
ನೌಕರರ ಸಂಘಕ್ಕೆ ಜಮೀನು ಪಡೆಯಲು ಪ್ರಯತ್ನ, ನೌಕರರ ಸಮಸ್ಯೆ ಆಲಿಸಲು ಜಂಟಿ ಸಮಾಲೋಚನಾ ಸಮಿತಿ ರಚನೆಗೆ ಒತ್ತು ಮತ್ತಿತರ ಚಟುವಟಿಕೆಗಳ ಮೂಲಕ ನೌಕರರ ಗಮನ ಸೆಳೆದಿದ್ದರು.
ಇದೀಗ ರಾಜ್ಯಾಧ್ಯಕ್ಷರು ಗೊಂದಲಗಳಿಗೆ ತೆರೆ ಎಳೆದಿರುವುದರಿಂದ ಭಿನ್ನರಾಗ ತೆಗೆದಿದ್ದವರನ್ನು ಸೇರಿದಂತೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ದು, ನೌಕರರ ಸಂಘವನ್ನು ಮತ್ತಷ್ಟು ಬಲಗೊಳಿಸುವ ಜವಾಬ್ದಾರಿ ಸುರೇಶ್‍ಬಾಬು ಹೆಗಲೇರಿದ್ದು, ಇನ್ನಾದರೂ ಇಂತಹ ಗೊಂದಲದ ಹೇಳಿಕೆಗಳಿಗೆ ಕೊನೆಯಾಡಿ ಸಂಘ ಸರಿದಾರಿಯಲ್ಲಿ ಸಾಗಲಿ ಎಂಬುದು ನೌಕರರ ಆಶಯವಾಗಿದೆ.