ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಕೋವಿಡ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿಗೆ ತಲಾ 5 ಸಾವಿರ ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿರುವ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಇನ್ನೊಂದು ಕಂತಿನಲ್ಲಿ ಮತ್ತೆ 5 ಸಾವಿರ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಸುರೇಶ್‍ಕುಮಾರ್ ನೇತೃತ್ವದ ಎಂಎಲ್‍ಸಿಗಳ ನಿಯೋಗಕ್ಕೆ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪ 5 ಸಾವಿರ ರೂ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಆದರೆ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಿಕ್ಷಕರಿಗೆ ನೀಡಿರುವ 5 ಸಾವಿರ ರೂ ಏನೇನೂ ಸಾಲದು, ಮತ್ತೊಂದು ಕಂತಿನಲ್ಲಿ ಇನ್ನೂ 5 ಸಾವಿರ ಘೋಷಿಸುವ ಮೂಲಕ ಅವರ ನೆರವಿಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಕ್ಷೇತ್ರ ಶಿಕ್ಷಣ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದೆ, ಕೋವಿಡ್‍ನಿಂದಾಗಿ ಬಹುತೇಕ ಶಾಲಾ ಕಾಲೇಜುಗಳು ಸಂಕಷ್ಟಕ್ಕೆ ಒಳಗಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಬೋಧಕ,ಬೋಧಕೇತರ ಸಿಬ್ಬಂದಿ ಜೀವನ ನಡೆಸುವುದು ದುಸ್ತರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಕ್ಕಾಗಿ ಅವರು ಈ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅನೇಕ ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಿಗೂ ಅಡಚಣೆಯಾಗಿದೆ, ಅದರಲ್ಲೂ ತಾಲ್ಲೂಕು, ಜಿಲ್ಲೆ, ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳ ಸ್ಥಿತಿ ಮತ್ತಷ್ಟು ಸಂಕಷ್ಟದಲ್ಲಿದೆ, ಸರ್ಕಾರ ನಿಗಧಿಗೊಳಿಸಿದ ಶುಲ್ಕವನ್ನೂ ಪೋಷಕರು ನೀಡಿಲ್ಲ ಎಂದು ತಿಳಿಸಿದ್ದಾರೆ.
6 ರಿಂದ 9 ನೇತರಗತಿ ವರೆಗೂ ಪರೀಕ್ಷೆ ಇಲ್ಲದೇ ಪಾಸ್ ಮಾಡಲು ಸೂಚಿಸಿದ್ದರಿಂದಾಗಿ ಪರೀಕ್ಷಾ ಸಂದರ್ಭದಲ್ಲಿ ವರ್ಷದ ಬಾಕಿ ಶುಲ್ಕ ಶಾಲೆಗೆ ಕಟ್ಟುತ್ತಿದ್ದ ಪೋಷಕರು ಶಾಲೆಗಳ ಕಡೆ ತಿರುಗಿ ನೋಡಿಲ್ಲ, ಕೋವಿಡ್ ಸಂಕಷ್ಟವೂ ಸಹಾ ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಿಗದಿರಲು ಮುಖ್ಯಕಾರಣವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಕೊರೋನಾ ಸಂಕಷ್ಟಕ್ಕೀಡಾಗಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪೋಷಕರು ಶುಲ್ಕ ಭರಿಸದ ಕಾರಣ ಶಾಲೆಗಳ ಆಡಳಿತ ಮಂಡಳಿಗಳು ಈ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದುದಾಗಿ ತಿಳಿಸಿದ್ದಾರೆ.
ಒಟ್ಟಾರೆ 15 ತಿಂಗಳಿಂದ ಜಾತಕ ಪಕ್ಷಿಗಳಂತೆ ಕಾದಿದ್ದ ಸುಮಾರು 2.5 ಲಕ್ಷ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ,ಸಿಬ್ಬಂದಿಗೆ ಇದೀಗ ತಲಾ 5 ಸಾವಿರ ರೂ ಪ್ಯಾಕೇಜ್ ಘೋಷಿಸುವ ಮೂಲಕ ಬಿಜೆಪಿ ಸರ್ಕಾರ ಅವರ ಕೈಹಿಡಿದಿದೆ ಎಂದು ತಿಳಿಸಿರುವ ಅವರು, ಮತ್ತೆ ಇನ್ನೊಂದು ಕಂತಿನಲ್ಲಿ 5 ಸಾವಿರ ಘೋಷಣೆಗೆ ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.