ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಕೋವಿಡ್ ಕಠಿಣ ಲಾಕ್‍ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ವಾಹನ,ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಸೋಂಕು ತಡೆಯುವ ದೃಷ್ಟಿಯಿಂದ ಜನತೆ ಸಹಕಾರ ನೀಡಬೇಕು ಎಂದು ವಾರ್ಡ್ ನೋಡಲ್ ಅಧಿಕಾರಿ ಹಾಗೂ ಬಿಇಒ ಕೆ.ಎಸ್.ನಾಗರಾಜಗೌಡ ಮನವಿ ಮಾಡಿದರು.
ಶುಕ್ರವಾರ ಲಾಕ್‍ಡೌನ್ ಹಿನ್ನಲೆಯಲ್ಲಿ ನಗರದ ಟೇಕಲ್ ರಸ್ತೆಯಲ್ಲಿ ಅನಗತ್ಯ ಓಡಾಟ ನಡೆಸಿದ ವಾಹನಗಳನ್ನು ತಡೆದು ಪರಿಶೀಲಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರ ಕೋವಿಡ್ ಸೋಂಕು ತಡೆಗೆ ಲಾಕ್‍ಡೌನ್ ಅಸ್ತ್ರ ಉಪಯೋಗಿಸಿದೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಲ್ಲೂ ಲಾಕ್‍ಡೌನ್ ಯಶಸ್ವಿಗೊಳಿಸಿ ಸೋಂಕು ತಡೆಯಲು ಎಲ್ಲಾ ನಾಗರೀಕರು ನೆರವಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದ ಅನೇಕ ಸಮಸ್ಯೆಗಳಾಗಿವೆ, ಇದೀಗ ಲಾಕ್‍ಡೌನ್ ಮೂಲಕ ಸೋಂಕು ಕಡಿಮೆಯಾಗಿ ಕೋಲಾರ ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮನೆಯಲ್ಲೇ ಉಳಿದುಕೊಳ್ಳಿ, ಅನಗತ್ಯ ಓಡಾಟ ಬೇಡ ಎಂದರು.
ನಗರದಲ್ಲಿ ಜಿಲ್ಲಾಡಳಿತ ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಅವಕಾಶ ಕಲ್ಪಿಸಿದೆ, ಆದರೆ ಜನ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅಲ್ಲಿಯೂ ಗುಂಪು ಸೇರಿ ತಿಂಡಿ ಖರೀದಿಸುತ್ತಿರುವುದು ಕಂಡು ಬರುತ್ತಿದೆ, ಇದು ಸರಿಯಲ್ಲ ಎಂದ ಅವರು, ಹೋಟೆಲ್‍ಗಳವರೂ ಸಾಮಾಜಿಕ ಅಂತರ,ಮಾಸ್ಕ್ ಇಲ್ಲವಾದರೆ ಅಂತಹವರಿಗೆ ತಿಂಡಿ ಪಾರ್ಸಲ್ ನೀಡಬಾರದು ಎಂದು ಸೂಚಿಸಿದರು.
ಆಸ್ಪತ್ರೆ, ಮೆಡಿಕಲ್‍ಸ್ಟೋರ್, ಹಾಲಿನ ನೆಪ ಹೇಳಿಕೊಂಡು ನಗರದಲ್ಲಿ ಸುತ್ತಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಪೊಲೀಸರು ಕಠಿಣ ನಿಯಮಗಳ ಮೂಲಕ ತಡೆಯುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಶಿಕ್ಷಕರಿಗೂ ಲಸಿಕೆ
ವಾರದಲ್ಲಿ ಅಭಿಯಾನ
ತಾಲ್ಲೂಕಿನ ಎಲ್ಲಾ ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳ ಶಿಕ್ಷಕರಿಗೆ ಲಸಿಕೆ ನೀಡಲಿ ಬೃಹತ್ ಅಭಿಯಾನವನ್ನು ಈ ವಾರವೇ ನಗರದ ಬಿಇಒ ಕಚೇರಿಯ ಮೈದಾನದಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಲಸಿಕೆ ಲಭ್ಯತೆ ಕುರಿತು ಮಾಹಿತಿ ಪಡೆದು ಎಲ್ಲಾ ಶಿಕ್ಷಕರಿಗೂ ಲಸಿಕೆ ಹಾಕಿಸುವ ಕಾರ್ಯವನ್ನು ಮಾಡಲು ನಿರ್ಧರಿಸಿದ್ದು, ಶಿಕ್ಷಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.