ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಶ್ರೀನಿವಾಸಪುರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ಕೋವಿಡ್ ಪರೀಕ್ಷೆಗಾಗಿ ಸುಸಜ್ಜಿತ ಪ್ರಯೋಗಲಾಯವನ್ನು ಇನ್ನು 15 ದಿನದೊಳಗೆ ನಿರ್ಮಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.
ಶ್ರೀನಿವಾಸಪುರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೂರು ಕಡೆ ಮಾತ್ರ ಪ್ರಯೋಗಲಾಯ ಮಾಡಲು ಅವಕಾಶಗಳಿದ್ದು, ಇದರಲ್ಲಿ ಶ್ರೀನಿವಾಸಪುರವು ಒಂದಾಗಿದೆ ಎಂದರು.
ಪ್ರಯೋಗಾಲಯಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಪರಿಕರಗಳನ್ನು 3-4 ದಿನದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.ಇನ್ನೊಂದು ವಾರದಲ್ಲಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ ಟೆಸ್ಟಿಂಗ್‍ಲ್ಯಾಬ್ ಸ್ಥಾಪಿಸಲಾಗುವುದು ಎಂದರು.
ಆಕ್ಸಿಜನ್ ಪ್ಲಾಂಟ್ ನಿರ್ಮಿಸುವ ಮೂಲಕ ಸರ್ಕಾರಿ ಆಸ್ಪತ್ರೆಯನ್ನು 60 ಬೆಡ್‍ಗಳ ಸ್ವಾವಲಂಭಿ ಆಸ್ಪತ್ರೆಯಾಗಲಿದ್ದು ಇದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞನತೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಸಾರ್ವಜನಿಕರು ಕೋವಿಡ್ ಟೆಸ್ಟ್ ಮಾಡಿಸಿ ಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದಾಗುತ್ತಿಲ್ಲ. ರೋಗದ ಲಕ್ಷಣಗಳು ಕಂಡು ಬರುವ ಪ್ರತಿಯೊಬ್ಬರೂ ಟೆಸ್ಟ್ ಮಾಡಿಸಿ ಕೊಳ್ಳುವುದು ಸೂಕ್ತ. ಒಂದು ದಿನಕ್ಕೆ 2 ಸಾವಿರ ಮಂದಿ ಟೆಸ್ಟ್ ಮಾಡಿಸಿ ಕೊಳ್ಳಬಹುದಾಗಿದೆ ಎಂದರು.
ಕೋವಿಡ್ ಟೆಸ್ಟ್ ಮಾಡಿದ ನಂತರ 3 ದಿನಕ್ಕೆ ಫಲಿತಾಂಶ ನೀಡುತ್ತಿರುವುದನ್ನು ಮುಂದಿನ ದಿನಗಳಲ್ಲಿ 24 ತಾಸುಗಳಲ್ಲಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಖಾಸಗಿ ಕಲ್ಯಾಣ ಮಂದಿರದಲ್ಲಿ 30 ಬೆಡ್‍ಗಳು ಹಾಗೂ ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಯಲ್ಲಿ 30 ಬೆಡ್ ಅಳವಡಿಸಿ ಚಿಕಿತ್ಸೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. 30 ಜನಕ್ಕೆ ಆಕ್ಸಿಜನ್ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳಿಗೆ ಸರ್ಕಾರದ ವ್ಯವಸೆಗಳ ಜತೆಗೆ ನಾವು ಕೈ ಜೋಡಿಸಲು ಲ್ಯಾಬ್ ಹಾಗೂ ಆಕ್ಸಿಜನ್ ಪ್ಲಾಂಟ್‍ಗೆ 75 ಲಕ್ಷ ರೂ ವೆಚ್ಚವನ್ನು ಭರಿಸಬೇಕಾಗಿದ್ದು, ಸಂಸದರು, 15 ಲಕ್ಷ ರೂ, ಶಾಸಕರ ನಿಧಿಯಿಂದ 10 ಲಕ್ಷ ರೂ, ವಿಧಾನ ಪರಿಷತ್ ಸದಸ್ಯ ನಸೀರ್ ಆಹಮದ್ ಹಾಗೂ ಕೋಚಿಮುಲ್ ಅಧ್ಯಕ್ಷ ನಂಜೇಗೌಡರು, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಇನ್ನು ಅನೇಕರ ನೆರವು ಪಡೆಯುತ್ತಿರುವುದಾಗಿ ತಿಳಿಸಿದರು.
ಪ್ರಸ್ತುತ ಶ್ರೀನಿವಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ 30 ಬೆಡ್‍ಗಳು ಭರ್ತಿಯಾಗಿದ್ದು, ಎಲ್ಲರಿಗೂ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ನಾಲ್ಕು ವೆಂಟಿಲೇಟರ್‍ಗಳು ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ತಂಡವನ್ನು ರಚಿಸಿ ಎಲ್ಲಾ ಪಂಚಾಯಿತಿಗಳಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸಿ ಚಿಕಿತ್ಸೆ ನೀಡುವ ಮೂಲಕ ಕೊರೋನಾದಿಂದ ಮುಕ್ತಗೊಳಿಸಿ ಆರೋಗ್ಯ ಕರ್ನಾಟಕವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.
ಇದಲ್ಲದೆ ಕೋವಿಡ್ ಸೆಂಟರ್‍ಗಳನ್ನು ಮಾಡುವ ಮೂಲಕ ಓರ್ವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗುವುದು, ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಅವಶ್ಯಕವಾದ ಹಣ್ಣು, ತರಕಾರಿ. ಮೊಟ್ಟೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಔಷಧಿಗಳನ್ನು ಬೆಂಗಳೂರಿನ ಮೆಡಿಕಲ್ ಕಾಲೇಜ್‍ನಿಂದ ಉಚಿತವಾಗಿ ಪೂರೈಸುವ ಭರವಸೆ ದೊರೆಕಿದೆ. ಕೋವಿಡ್ ವೈರಸ್ ಇರುವ ರೋಗಿಗಳಿಗೆ ಟೆಲಿಕಾಸ್ಟ್ ಮೂಲಕ ಸಲಹೆಗಳನ್ನು ನೀಡಿ ಆತ್ಮ ಸ್ಥೆರ್ಯ ತುಂಬಿ ಆತಂಕವನ್ನು ದೂರ ಮಾಡಲಾಗುವುದು ಎಂದರು.
ಖಾಸಗಿ ಕಲ್ಯಾಣ ಮಂಟಪ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ
ಇದರಲ್ಲಿ ಯಾವೂದೇ ರಾಜಕೀಯ ಇಲ್ಲ, ಯಾವೂದೇ ಜಾತಿ ಧರ್ಮ ಭೇದಭಾವಗಳಿಲ್ಲ. ನಾವು ಇದನ್ನು ಯಾವೂದೇ ರೀತಿ ರಾಜಕೀಯ ತೆವಲಿಗೆ ಮಾಡುತ್ತಿಲ್ಲ. ಜನಪ್ರತಿನಿಧಿಯಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದರು.