ಕೋವಿಡ್ ಸೋಂಕಿತರನ್ನು ಅಸ್ಪ್ರಶ್ಯರಂತೆ ಕಾಣದೇ ಧೈರ್ಯ ತುಂಬೋಣ ಸಮುದಾಯವೇ ನೆರವಿಗೆ ನಿಲ್ಲುವಂತಾಗಲಿ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸೋಂಕಿತರನ್ನು ಅಸ್ಪ್ರಶ್ಯರಂತೆ ಕಾಣದೇ ಸಮುದಾಯವೇ ಅವರ ನೆರವಿಗೆ ನಿಂತು ಆತ್ಮಸ್ಥೈರ್ಯ ತುಂಬುವ ಮೂಲಕ ಈ ಮಹಾಮಾರಿಯಿಂದಾಗುತ್ತಿರುವ ಸಾವಿನ ಪ್ರಮಾಣ ತಗ್ಗಿಸಬಹುದು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ಮನ್ವಂತರ ಜನಸೇವಾ ಟ್ರಸ್ಟ್ ಹಾಗೂ ಮನ್ವಂತರ ಪ್ರಕಾಶನದ ಆಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಿಧಿವಶರಾದ ತಮ್ಮ ಮಾತೃಶ್ರೀ ಅಕ್ಕೆಮ್ಮ ಅವರ ಸ್ಮರಣಾರ್ಥ ಪತ್ರಕರ್ತರು ಮತ್ತು ಹಲವು ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಂಬಂಧ ಸರ್ಕಾರವನ್ನು ನಿಂದಿಸುವುದರಿಂದ ಪ್ರಯೋಜನವಿಲ್ಲ, ಸಮುದಾಯವೇ ಸೋಂಕಿತರ ಸೇವೆಗೆ ನಿಲ್ಲಬೇಕು, ಭಯದಿಂದಲೇ ಹೆಚ್ಚಿನ ಸಾವು ಸಂಭವಿಸುತ್ತಿರುವುದರಿಂದ ಸೋಂಕಿತರಿಗೆ ಧೈರ್ಯ ತುಂಬಬೇಕು, ಆತಂಕ ದೂರ ಮಾಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಸಾವಿನಿಂದ ತಪ್ಪಿಸಬಹುದು ಎಂದರು.
ಕೋವಿಡ್ ಬರುತ್ತೆ ಹೋಗುತ್ತೆ ಆದರಿಂದ ಏನೂ ಆಗದು ಎಂಬ ಧೈರ್ಯ ಜನರಲ್ಲಿ ಬರಬೇಕಾಗಿದೆ, ಕೊರೋನಾ ಪೀಡಿತರಾಗಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಅರ್ಪಿಸುವ ಕೊನೆಯ ಕಾರ್ಯಕ್ರಮ ಇದಾಗಲಿ, ಜನರ ಪ್ರಾಣ ಉಳಿಸುವ ಕಾರ್ಯದಲ್ಲಿ ಪತ್ರಕರ್ತರು ಸೇರಿದಂತೆ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಗೋವಿಂದಗೌಡರ ತಾಯಿ ಅಕ್ಕೆಮ್ಮ ಆತ್ಮವಿಶ್ವಾಸದ ಪರ್ವತವಿದ್ದಂತೆ, ನಯ-ನಾಜೂಕಿನ ನಾಟಕೀಯ ಮಾತುಗಳು ಅವರದಲ್ಲ, ನೇರ ಹಾಗೂ ನಿಷ್ಠೂರದಿಂದ ಮಾತನಾಡುವ ಅವರ ಹೃದಯವಂತಿಕೆಯೇ ಇಂತಹ ಸಾಮಾಜಿಕ ಕಾರ್ಯಗಳಿಗೆ ಗೋವಿಂದಗೌಡರಿಗೆ ಪ್ರೇರಣೆಯಾಗಿದೆ ಎಂದರು.
ನೋವಿನಲ್ಲಿರುವವರಿಗೆ ಗೋವಿಂದಗೌಡರು ಆಪದ್ಬಾಂದವರಿದ್ದಂತೆ ಎಂದು ತಿಳಿಸಿ ತಾಯಿ ಅಕ್ಕೆಮ್ಮ ಅವರ ಆತ್ಮವಿಶ್ವಾಸದ ಮಾತುಗಳು ಹಾಗೂ ಗೋವಿಂದಗೌಡರ ನೆರವಿನ ಹೃದಯವಂತಿಕೆ ಕುರಿತು ಮಾತನಾಡುತ್ತಾ ಭಾವಪರವಶರಾದರು.
ನಾನು,ನನ್ನದು, ನನ್ನಿಂದಲೇ ಎಂಬ ಅಹಂಕಾರಕ್ಕೆ ಕೋವಿಡ್ ಪಾಠ ಕಲಿಸಿದೆ, ನಾವೆಲ್ಲಾ ನೇರವಾಗಿ ಮಾತನಾಡುವುದನ್ನು ಕಲಿಯೋಣ ಮನುಷ್ಯರಾಗಿ ಬಾಳೋಣ ಎಂದು ಕಿವಿಮಾತು ಹೇಳಿ, ಅಕ್ಕೆಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಕಷ್ಟದಲ್ಲಿರುವವರ ಕೈಹಿಡಿಯುವ ಗೋವಿಂದಗೌಡರ ಗುಣಕ್ಕೆ ತಾಯಿ ಅಕ್ಕೆಮ್ಮ ಅವರೇ ಪ್ರೇರಣೆ, ನಿರಂತರವಾಗಿ ಸಮಾಜಸೇವೆ ಮಾಡುವ ಅವರ ಹೃದಯವಂತಿಕೆ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, 25 ವರ್ಷಗಳಿಂದ ಗೋವಿಂದಗೌಡರ ಜತೆಗಿದ್ದೇವೆ, ಜಾತಿ,ಧರ್ಮದ ಎಲ್ಲೆ ಮೀರಿ ಕಷ್ಟದಲ್ಲಿ ಇರುವವರಿಗೆ ನೆರವಾಗುವ ಗುಣ ಅವರ ತಾಯಿ ಅಕ್ಕೆಮ್ಮ ಅವರಿಂದಲೇ ಬಳುವಳಿಯಾಗಿ ಅವರಿಗೆ ಬಂದಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡೋಣ, ಗೋವಿಂದಗೌಡರ ಮಾತೃಶ್ರೀ ಅಕ್ಕೆಮ್ಮ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಕ್ಕೆಮ್ಮ ಹಾಗೂ ಈವರೆಗೂ ಕೋವಿಡ್‍ನಿಂದ ಮೃತಪಟ್ಟವರಿಗೆ 2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮನ್ವಂತರ ಪ್ರಕಾಶನದ ಆಧ್ಯಾತ್ಮಿಕ ವಿಭಾಗದ ಸಂಚಾಲಕ ಎಸ್.ಮಂಜುನಾಥ್ ಉಪಸ್ಥಿತರಿದ್ದು, ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆ ಖಜಾಂಚಿ ಎಸ್.ಎನ್.ಪ್ರಕಾಶ್ ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು
.