ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆ ಕುಂಠಿತಗೊಳ್ಳದಂತೆ ಶಿಕ್ಷಕರು ಸದಾ ಎಚ್ಚರವಹಿಸಿ ಆನ್‍ಲೈನ್,ದೂರವಾಣಿ ಮೂಲಕ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ-ಕೃಷ್ಣಮೂರ್ತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಆನ್‍ಲೈನ್ ಮತ್ತು ದೂರವಾಣಿ ಮೂಲಕ ಸಂಪರ್ಕಿಸಿ ನಿರಂತರವಾಗಿ ಅವರ ಶೈಕ್ಷಣಿಕ ಪ್ರಗತಿಯ ಪರಿಶೀಲನೆ ನಡೆಸುವಂತೆ ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರಿಗೆ ಡಿಡಿಪಿಐ ಕೃಷ್ಣಮೂರ್ತಿ ಕರೆ ನೀಡಿದರು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ,ಅನುದಾನಿತ,ಖಾಸಗಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಆನ್‍ಲೈನ್ ಸಭೆ ನಡೆಸಿದ ಅವರು, ಸಾಧ್ಯವಾದಷ್ಟು ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗದಂತೆ ಕ್ರಮವಹಿಸಲು ಕಿವಿಮಾತು ಹೇಳಿದರು.
ಕೋವಿಡ್ ಜನತಾ ಕಫ್ರ್ಯೂ ಹಿನ್ನಲೆಯಲ್ಲಿ ಹಾಗೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಆತಂಕದ ನಡುವೆ ಪರೀಕ್ಷೆಗೆ ಸಿದ್ದತೆಗಳು ನಡೆಸಲಾಗುತ್ತಿದೆ, ಈಗಾಗಲೇ ಸರ್ಕಾರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿರುವುದರಿಂದ ಅದರಂತೆ ಮಕ್ಕಳನ್ನು ನಾವು ಸಿದ್ದಪಡಿಸಬೇಕಾಗಿದೆ, ವಿದ್ಯಾರ್ಥಿಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆ ಕುಂಠಿತವಾಗಲು ಬಿಡಬಾರದು ಎಂದರು.
ಆನ್‍ಲೈನ್‍ನಲ್ಲಿ ಮಕ್ಕಳಿಗೆ ಕಲಿಕೆ ಮುಂದುವರೆಸಲು ಇರುವ ಅವಕಾಶಗಳನ್ನು ಬಳಸಿಕೊಳ್ಳಿ, ಆನ್‍ಲೈನ್‍ನಲ್ಲಿ ಸಾಧ್ಯವಾಗದಿದ್ದರೆ ಮಕ್ಕಳೊಂದಿಗೆ ದಿನಕ್ಕೊಂದು ಬಾರಿ ಫೋನ್‍ನಲ್ಲೇ ಮಾತನಾಡಿ, ಅವರಿಗೆ ಅಗತ್ಯ ಸಲಹೆ ನೀಡಿ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಿದ್ದಗೊಳಿಸಿ ಎಂದು ತಿಳಿಸಿದರು.

ಇಲಾಖೆ ಈಗಾಗಲೇ ಮಕ್ಕಳ ಕಲಿಕೆಗೆ ಸುಲಭವಾಗಲಿ ಎಂಬ ಉದ್ಧೇಶದಿಂದ ಆರು ಸೆಟ್ ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಿದೆ, ಜತೆಗೆ ಇದೇ ಮೊದಲ ಬಾರಿಗೆ `ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಕೋಠಿಯನ್ನು ಸಿದ್ದಪಡಿಸಿ ಒದಗಿಸಿದೆ ಇದನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ಶಿಕ್ಷಕರು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಪ್ರಶ್ನೋತ್ತರ ಕೋಠಿ ನೀಡಿರುವುದರಿಂದ ಅವರಿಗೆ ಅನುಮಾನವಿರುವ ಪ್ರಶ್ನೆಗಳಿಗೆ ಅಲ್ಲೇ ಉತ್ತರವೂ ಸಿಗುತ್ತದೆ, ಅದನ್ನು ನಿರಂತರವಾಗಿ ಅಭ್ಯಾಸ ಮಾಡಿ ಎಂದು ತಿಳಿಸಿ ಎಂದು ಸಲಹೆ ನೀಡಿದರು.


8, 9ನೇ ತರಗತಿಮೌಲ್ಯಾಂಕನ ಪೂರ್ಣ

ಕೋವಿಡ್ ಸೋಂಕಿನ ಆತಂಕದ ಹಿನ್ನಲೆಯಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳನ್ನು ಮೌಲ್ಯಾಂಕನದ ಆಧಾರದ ಮೇಲೆ ಮುಂದಿನ ತರಗತಿಗೆ ಉತ್ತೀರ್ಣ ಮಾಡಲು ಆದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಮೌಲ್ಯಾಂಕನ ಕಾರ್ಯ ಪೂರ್ಣಗೊಂಡಿದೆಯೇ, ಮಕ್ಕಳ ಕ್ರೋಢೀಕೃತ ಅಂಕಗಗಳ ವಹಿ ದಾಖಲಿಸಲಾಗಿದೆಯೇ ಮತ್ತು ಅಂಕಗಳನ್ನು ಎಸ್‍ಎಟಿಎಸ್‍ನಲ್ಲಿ ಅಫ್‍ಡೇಟ್ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಮತ್ತು ಈ ಕಾರ್ಯ ಮುಗಿದಿರಲೇ ಬೇಕು ಎಂದು ತಾಕೀತು ಮಾಡಿದರು.


ಮಕ್ಕಳಿಗೆ ಕೋವಿ ಜಾಗೃತಿ ಮೂಡಿಸಿ

ಮಕ್ಕಳು ಶಾಲೆ ರಜೆಯಾದ ಕಾರಣ ಮನೆಯಲ್ಲಿದ್ದಾರೆ, ಈಗಾಗಲೇ ಕೋವಿಡ್ ಮಹಾಮಾರಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಕವಾಗಿ ಹರಡಿದೆ ಮತ್ತು ಮಾರಣಾಂತಿಕವಾಗಿಯೂ ಇರುವುದರಿಂದ ಮಕ್ಕಳಿಗೆ ಶಿಕ್ಷಕರು ನಿರಂತರವಾಗಿ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.
ಆನ್‍ಲೈನ್ ಕ್ಲಾಸ್ ಹಾಗೂ ದೂರವಾಣಿ ಮಾಡಿದಾಗ ಮಕ್ಕಳಿಗೆ ಪಾಠದ ಜತೆಗೆ ಕೋವಿಡ್ ಜಾಗೃತಿ ಮೂಡಿಸುವ ಕಾರ್ಯವನ್ನು ಜತೆಯಲ್ಲಿ ಮಾಡಿ, ಮಕ್ಕಳು ಮನೆಯಿಂದ ಹೊರ ಹೋಗದಂತೆ ಪೋಷಕರಿಗೆ ನಿಗಾ ವಹಿಸಲು ಸಲಹೆ ನೀಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕಲಿಕೆಯನ್ನು ಮುಂದುವರೆಸುವಂತೆ ತಿಳಿಸಿ ಎಂದರು.


ಮೌಲ್ಯಮಾಪನಕ್ಕೆ ಹೆಸರು ನೋಂದಾವಣೆ
ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಶಿಕ್ಷಕರ ಹೆಸರು ನೋಂದಾಯಿಸಲು ಈಗಾಗಲೇ ತಿಳಿಸಲಾಗಿದ್ದು, ಆ ಕಾರ್ಯ ಮುಗಿದಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಎಂದು ಮುಖ್ಯಶಿಕ್ಷಕರಿಗೆ ಸಲಹೆ ನೀಡಿದರು.
ಕೋವಿಡ್ ಹಿನ್ನಲೆಯಲ್ಲಿ ಶಾಲೆಗಳ ಪುನರಾರಂಭದ ದಿನಾಂಕಗಳು ಏರುಪೇರಾಗಿದೆ, 2021-22ನೇ ಸಾಲಿಗೆ ಶೈಕ್ಷಣಿಕ ವರ್ಷದ ಪುನರಾರಂಭಕ್ಕೆ ಈಗಲೇ ಸಿದ್ದತೆ ಮಾಡಿಕೊಳ್ಳಿ, ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಗಮನಹರಿಸಿ, ಈ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಮತ್ತಿತರ ಮೂಲಗಳಿಂದ ಪಡೆದುಕೊಳ್ಳುವ ಚಿಂತನೆ ನಡೆಸಿ ಎಂದು ಸೂಚಿಸಿದರು.

ಡಿಡಿಪಿಐ ಅವರು ನಡೆಸಿದ ಆನ್‍ಲೈನ್ ಝೂಮ್ ಮೀಟಿಂಗ್‍ನಲ್ಲಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯಿತ್ರಿ, ಕೃಷ್ಣಪ್ಪ ಸೇರಿದಂತೆ ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.