ನಾಗರಿಕರು ಕೊರೊನಾ ನಿಯಮಗಳನ್ನು ಕಡ್ದಾಯವಾಗಿ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು; ಡಿ.ಶೇಖರರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ನಾಗರಿಕರು ಕೊರೊನಾ ತಡೆ ನಿಯಮಗಳನ್ನು ಕಡ್ದಾಯವಾಗಿ ಪಾಲಿಸಬೇಕು. ಪಾಲಿಸದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಾಗರಿಕ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ನಡುವೆ ನಾಗರಿಕರಿಗೆ ಉತ್ತಮ ಸೇವೆ ಕಲ್ಪಿಸಲು ಪುರಸಭೆ ಪ್ರಯತ್ನಿಸುತ್ತಿದೆ. ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಕೋವಿಡ್ ತಡೆ ನಿಯಮ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತು. ಕೊರೊನಾ ತಡೆ ಕುರಿತು ಜಾಗೃತಿ ಮೂಡಿಸಲಾಯಿತು. ರಸ್ತೆಯಲ್ಲಿ ನಿಂತು ಮಾಸ್ಕ್ ರಹಿತರಿಗೆ ಮಾಸ್ಕ್ ಧರಿಸಿ ತಿಳುವಳಿಕೆ ನೀಡಲಾಯಿತು. ಆದರೂ ಕೆಲವರು ಮಾಸ್ಕ್ ಹಾಕದೆ ಸಂಚರಿಸುವುದು ಕಂಡುಬರುತ್ತದೆ. ಸಾಂಘಿಕ ಪ್ರಯತ್ನದ ಮೂಲಕ ಕೊರೊನಾ ಹರಡುವುದನ್ನು ತಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕೊರೊನಾ ವೈರಾಣು ಹರಡದಂತೆ ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಜನನಿಬಿಡ ಪ್ರದೇಶದಲ್ಲಿ ಅಂತರ ಪಾಲನೆ ಮಾಡಬೇಕು. ಸ್ಯಾನಿಟೈಸರ್ ಬಳಸಬೇಕು. ಸಾಬೂನಿನಿಂದ ಕೈ ತೊಳೆಯಬೇಕು ಎಂದು ಸಲಹೆ ಮಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ಸದಸ್ಯ ಅನ್ನೀಸ್ ಅಹ್ಮದ್, ಟಿ.ಎಂ.ಸಂತೋಷ್, ನಾಗೇಶ್, ಸಿಇಒ ರಾಜೇಶ್ವರಿ ಇದ್ದರು.