ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಗರ್ಭಿಣಿಯರಿಗೆ ಕೋಲಾರದ ಎಸ್‍ಎಸ್‍ಎನ್ ಆರ್ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಉಪ ಮುಖ್ಯ ಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ಒದಗಿಸಲಾಗಿರುವ ಚಿಕಿತ್ಸೆ ಹಾಗು ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಆಸ್ಪತ್ರೆ ಸುಸಜ್ಜಿತವಾಗಿದ್ದು, ಪ್ರಸ್ತುತ ಕೋವಿಡ್ ರೋಗಿಗಳಿಗೆ 40 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿದೆ. ಆದರೆ ಎರಡನೇ ಅಲೆ ಗಂಭೀರವಾಗಿದ್ದು, ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್‍ಗಳ ಕೊರತೆ ಇಲ್ಲ. 23 ಸಿಲಿಂಡರ್‍ಗಳಿದ್ದು, ಆ ಪೈಕಿ 19 ಸಿಲಿಂಡರ್‍ಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಲು ಇನ್ನು 3 ಸಿಲಿಂಡರ್‍ಗಳಿವೆ. ವೈದ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಜನರ ಜೀವ ಉಳಿಸಬೇಕು. ಕೋವಿಡ್ ಪೀಡಿತರಿಗೆ ಅಗತ್ಯವಾದ ಮೂಲ ಸೌಕರ್ಯ ಒದಗಿಸಬೇಕು. ಗ್ರಾಮೀಣ ಪ್ರದೇಶದ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ಹೇಳಿದರು.
ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ರೆಡ್ಡಿ, ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್, ತಾಲ್ಲೂಕು ಅರೋಗ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಿ.ಎಸ್.ಶ್ರೀನಿವಾಸ್, ಡಾ. ರಂಗರಾವ್, ಡಾ. ಜಗದೀಶ್, ಡಾ. ನಿಯಂಜನ್, ಡಾ. ಕಮಲಮ್ಮ, ಪುರಸಭಾ ಸದಸ್ಯರಾದ ರಮೇಶ್, ರಾಜು, ಎಸ್.ವಿನೋದ್ ಬಾಬು, ಶೇಖ್ ಸೈಫುಲ್ಲಾ ಇದ್ದರು
.