ನಾಗರಿಕರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ; ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ನಾಗರಿಕರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಪಟ್ಟಣದಲ್ಲಿ ಸುತ್ತಾಡಿ ಮಾಸ್ಕ್ ಧರಿಸದ ನಾಗರಿಕರು ಹಾಗೂ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಮಾತನಾಡಿ, ಜನರ ನಿರ್ಲಕ್ಷ್ಯದ ಪರಿಣಾಮವಾಗಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಜನರ ಜೀವ ಉಳಿಸುವ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಅಂಗಡಿ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಇಲ್ಲವಾದರೆ ದಂಡ ವಿಧಿಸಿ ಅಂಗಡಿ ನಡೆಸಲು ನೀಡಿರುವ ಪರವಾನಗಿ ರದ್ದುಪಡಿಸಲಾಗುವುದು ಎಂದು ಹೇಳಿದರು.
ಬಸ್ ಪ್ರಯಾಣಿಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಕೊರೊನಾ ತಡೆ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಬಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಯಾಣಿಕರಿಗೆ ಎಚ್ಚರಿಕೆ ನೀಡಿ ದಂಡ ವಸೂಲು ಮಾಡಲಾಗುವುದು. ತಾಲ್ಲೂಕು ಆಡಳಿತ ಕೊರೊನಾ ತಡೆಗೆ ಪೂರಕವಾದ ಎಲ್ಲ ಕಾರ್ಯಗಳನ್ನೂ ಕೈಗೊಳ್ಳಬೇಕು. ಕೊರೊನಾ ಹರಡುವುದನ್ನು ತಪ್ಪಿಸಬೇಕು. ಗಾಮೀಣ ಪ್ರದೇಶದಲ್ಲೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ, ಕಂದಾಯ ನಿರೀಕ್ಷಕರಾದ ಕೆ.ಜಿ.ರಮೇಶ್, ಪೃಥ್ವಿರಾಜ್, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ರವಿಕುಮಾರ್, ಚೆಂದು, ಸಂತೋಷ್, ಸುರೇಶ್ ಇದ್ದರು.
ದಂಡ: ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್‍ನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ನಾಗರಾಜ್ ಅವರ ನೇತೃತ್ವದಲ್ಲಿ ಮಾಸ್ಕ್ ಧರಿಸದ ನಾಗರಿಕರು ಹಾಗೂ ವಾಹನ ಚಾಲಕರಿಗೆ ದಂಡ ವಿಧಿಸಲಾಯಿತು. ಪಿಡಿಒ ಸಂತೋಷ್ ಕುಮಾರ್ ಇದ್ದರು.