ಕೋವಿಡ್ ಲಸಿಕೆ ಪಡೆದುಕೊಂಡ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಆರೋಗ್ಯ ರಕ್ಷಣೆಗೆ ತಪ್ಪದೇ ಲಸಿಕೆ ಪಡೆಯಿರಿ-ಎಂ.ಎಲ್.ರಘುನಾಥ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೊರೋನಾ ಎರಡನೇ ಅಲೆ ಭೀತಿ, ರೂಪಾಂತರಿ ತಳಿಯ ಆತಂಕದ ವಾತಾವರಣದಲ್ಲಿ ಆರೋಗ್ಯ ರಕ್ಷಣೆಗೆ ಕೋವಿಡ್ ಲಸಿಕೆ ಪಡೆಯಲು ಧೈರ್ಯದಿಂದ ಮುಂದೆ ಬನ್ನಿ ಎಂದು ನಾಗರೀಕರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಕರೆ ನೀಡಿದರು.
ಇಲ್ಲಿನ ಗಾಂಧಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಕೋವಿಡ್ ಲಸಿಕೆ ಪಡೆದ ನಂತರ ಮಾತನಾಡಿದ ಅವರು, ಲಸಿಕೆಯಿಂದ ಅಡ್ಡಪರಿಣಾಮಗಳಿಲ್ಲ, ಈ ಬಗ್ಗೆ ನಾಗರೀಕರಲ್ಲಿ ಆತಂಕ ಅಗತ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ಈಗಾಗಲೇ ಮೊದಲ ಹಂತದಲ್ಲಿ ಕೋವಿಡ್ ವಾರಿಯರ್ಸ್, ವೈದ್ಯರೇ ಧೈರ್ಯದಿಂದ ಲಸಿಕೆ ಪಡೆದಿದ್ದಾರೆ, ಲಸಿಕೆ ಕುರಿತು ವದಂತಿಗಳಿಗೆ ಜನ ಕಿವಿಗೊಡಬಾರದು ಎಂದು ತಿಳಿಸಿದರು.
ಲಸಿಕೆ ಹಾಕಿಸಿಕೊಂಡ ಕೂಡಲೇ ನಾವು ಕೋವಿಡ್‍ನಿಂದ ಸಂಪೂರ್ಣ ಸುರಕ್ಷತೆ ಪಡೆದುಕೊಂಡೆವು ಎನ್ನುವಂತಿಲ್ಲ, ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಯಾದ ನಂತರವೇ ನಮಗೆ ಪ್ರಯೋಜನವಿದೆ ಎಂದ ಅವರು, ಲಸಿಕೆ ಪಡೆದರೂ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮುಂದುವರೆಸಬೇಕು ಎಂದರು.
ಲಸಿಕೆ ಪಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಹಾಗೂ ನ್ಯಾಯಾಧೀಶರಾದ ಸಿ.ಎಚ್.ಗಂಗಾಧರ್, ಕೋವಿಡ್ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ, ಜನತೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದರು.
ಅನೇಕ ವಿಜ್ಞಾನಿಗಳ ಸತತ ಸಂಶೋಧನೆಯ ನಂತರವೇ ಲಸಿಕೆ ಬಿಡುಗಡೆಯಾಗಿದೆ, ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ ಎಂಬುದನ್ನು ಸಾಕ್ಷೀಕರಿಸಿದ ನಂತರವೇ ನಮಗೆ ನೀಡಲಾಗುತ್ತಿದೆ ಎಂಬುದನ್ನು ಜನತೆ ಅರಿಯಬೇಕು ಎಂದರು.


ಎಲ್ಲಾ ವಕೀಲರಿಗೂ ಲಸಿಕೆಹಾಕಲು ಕ್ರಮ
ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿ, ವಕೀಲರ ಸಂಘದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಲ್ಲಾ ವಕೀಲರಿಗೂ ಕೋವಿಡ್ ಲಸಿಕೆ ಹಾಕಲು ಕ್ರಮ ಕೈಗೊಂಡಿದ್ದು, ವಕೀಲರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ 4 ವಾರಗಳ ನಂತರವೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಯಾಗುತ್ತದೆ ಎಂಬ ತಜ್ಞರ ಮಾತಿನಂತೆ ಲಸಿಕೆ ಪಡೆದರೂ ನಾವು ಸಾಮಾಜಿಕ ಅಂತರ, ಮಾಸ್ಕ್ ಧರಿಸೋಣ ಎಂದು ತಿಳಿಸಿದರು.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶಾಮಾ ಖಮರೋಸ್, ಲಸಿಕೆ ಹಾಕಿಸಿಕೊಂಡು ಯಾವುದೇ ಅಡ್ಡಪರಿಣಾಮಗಳಿಲ್ಲ, ಜನತೆ ಧೈರ್ಯದಿಂದ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಕೀಲರಾದ ಕೆ.ಆರ್.ಧನರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.