ಧಾನ್‍ಫೌಂಡೇಷನ್,ಎಂವಿಜೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ; ಗ್ರಾಮೀಣರಲ್ಲಿ ಆರೋಗ್ಯದ ಬಗ್ಗೆ ಉದಾಸೀನ ಬೇಡ-ಡಾ.ರಮ್ಯದೀಪಿಕಾ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೃಷಿ ಕಾರ್ಯಗಳ ಒತ್ತಡದಲ್ಲಿರುವ ಗ್ರಾಮೀಣ ಜನತೆ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಸಮಸ್ಯೆಗಳ ಕುರಿತು ಉದಾಸೀನ ತೋರಬಾರದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯದೀಪಿಕಾ ಕರೆ ಕರೆ ನೀಡಿದರು.
ಶನಿವಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಸೋಮನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಧಾನ್ ಫೌಂಡೇಷನ್, ಹೊಸಕೋಟೆಯ ಎಂವಿಜೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಆಸ್ಪತ್ರೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಎಂವಿಜೆ ಆಸ್ಪತ್ರೆಯ ವೈದ್ಯರು ಗ್ರಾಮೀಣ ಜನತೆಗೆ ಉಚಿತ ಸೇವೆ ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದ ಅವರು, ಗ್ರಾಮೀಣ ಜನತೆ ಕೃಷಿ,ಹೈನುಗಾರಿಕೆ ಚಟುವಟಿಕೆಗಳ ಒತ್ತಡದ ನಡುವೆಯೂ ತಮ್ಮ ಆರೋಗ್ಯರಕ್ಷಣೆಗೂ ಒತ್ತು ನೀಡಬೇಕು ಮತ್ತು ಇಂತಹ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಇಂದು ಆಸ್ಪತ್ರೆಗಳಿಗೆ ಬರುವ ಹೊರರೋಗಿಗಳ ಪ್ರಮಾಣ ಕಡಿಮೆಯಾಗಿದೆ, ಇದಕ್ಕೆ ಕೋವಿಡ್ ಸೋಂಕು ತಾಗುವುದು ಎಂಬ ಆತಂಕವೂ ಇದೆ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೋವಿಡ್ ಮಾರ್ಗಸೂಚಿಪಾಲಿಸುವ ಮೂಲಕ ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಆರೋಗ್ಯ ರಕ್ಷಣೆಗೆ ಸ್ಪಂದಿಸುವ ಕಾರ್ಯ ಎಂವಿಜೆ ಆಸ್ಪತ್ರೆ ಧಾನ್ ಫೌಂಡೇಷನ್ ಮಾಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ಕೋರಿದರು.
ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡೇಗೌಡ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು, ಈ ನಿಟ್ಟಿನಲ್ಲಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಈಗಾಗಲೇ ಅರಾಭಿಕೊತ್ತನೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಡಂಗೂರು ಸಾರುವ ಮೂಲಕ ಉಚಿತ ಆರೋಗ್ಯ ಶಿಬಿರದ ಕುರಿತು ಮಾಹಿತಿ ತಲುಪಿಸಲಾಗಿದೆ ಎಂದರು.
ಹಿರಿಯ ಆರೋಗ್ಯ ಸಹಾಯಕಿ ಹೆಚ್.ವಿ.ವಾಣಿ ಮಾತನಾಡಿ, ಕೋವಿಡ್ ಮಹಾಮಾರಿ ಮತ್ತೆ ಆವರಿಸುತ್ತಿದೆ, ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಕ್ರಮ ಕೈಗೊಂಡಿದ್ದು, ಎಲ್ಲಾ ಜನತೆ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬನ್ನಿ ಎಂದು ಕೋರಿ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸ್ವಷ್ಟಪಡಿಸಿದರು.


ರೆಡ್‍ಕ್ರಾಸ್ ಘಟಕದಡಿ ಮಕ್ಕಳಿಗೂ ತಪಾಸಣೆ


ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ರೆಡ್‍ಕ್ರಾಸ್ ಘಟಕದ ಆಶ್ರಯದಲ್ಲಿ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್, ಘಟಕದ ಮುಖ್ಯಸ್ಥೆ ಫರೀದಾ ನೇತೃತ್ವದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ಆರೋಗ್ಯ ಶಿಬಿರದಲ್ಲಿ ತಪಾಸಣೆ ನಡೆಸಿ ಆರೋಗ್ಯ ಸಲಹೆ ನೀಡಲಾಯಿತು.
ಶಿಬಿರದಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ 125ಕ್ಕೂ ಹೆಚ್ಚು ಮಕ್ಕಳು ತಪಾಸಣೆಗೆ ಒಳಗಾಗಿ ಶಿಬಿರದ ಲಾಭ ಪಡೆದುಕೊಂಡಿದ್ದು, ಉಳಿದಂತೆ ಅರಾಭಿಕೊತ್ತನೂರು ಮತ್ತಿತರ ಸುತ್ತಮುತ್ತಲ ಗ್ರಾಮಗಳಿಂದ 350ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದುಕೊಂಡರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆ ಜತೆಗೆ ಸ್ಥಳದಲ್ಲೇ ಔಷಧಿಗಳನ್ನು ವಿತರಿಸಲಾಯಿತು. ಹೆಚ್ಚಿನ ಚಿಕಿತ್ಸೆ ಇರುವ ರೋಗಿಗಳಿಗೆ ಉಚಿತ ಬಸ್ ಸೌಕರ್ಯದ ಪ್ರಯೋಜನ ಪಡೆದುಕೊಂಡು ಎಂವಿಜೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಲಾಯಿತು.
ಧಾನ್ ಫೌಂಡೇಷನ್‍ನ ಸಂಯೋಜಕ ರಮೇಶ್,ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮ್ಮ ಸಂಸ್ಥೆ ಕೈಗೊಂಡಿರುವ ಸಾಮಾಜಿಕ ಕಾರ್ಯಕ್ರಮಗಳ ಕುರಿತು ತಿಳಿಸಿ, ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದರು.
ಎಂವಿಜೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಮೋದ್ ನೇತೃತ್ವದಲ್ಲಿ ವೈದ್ಯರಾದ ಡಾ.ನಯನಾ ವಿ.ಗೌಡ, ಡಾ.ಸ್ನೇಹಾಲ್, ಡಾ.ರಿಷಿ, ಡಾ.ಗೌತಮ್, ಡಾ.ಭುವನಾ ಮತ್ತಿತರರು ರೋಗಿಗಳ ತಪಾಸಣೆ,ಚಿಕಿತ್ಸಾ ಕಾರ್ಯ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಾಭಿಕೊತ್ತನೂರು ಗ್ರಾ.ಪಂ ಅಧ್ಯಕ್ಷ ರಾಜಣ್ಣ ವಹಿಸಿದ್ದು,ಗ್ರಾ.ಪಂ ಸದಸ್ಯರಾದ ರೇಣುಕಮ್ಮ, ವೀಣಾ,ಕವಿತಾ, ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಗ್ರಾಮದ ಮುಖಂಡರಾದ ಕೆ.ಬಿ.ಮುನಿವೆಂಕಟಪ್ಪ, ಧಾನ್ ಫೌಂಡೇಷನ್‍ನ ಸಂಯೋಜಕ ದೇವರಾಜ್, ಅಸೋಸಿಯೇಟ್ ರಾಮಚಂದ್ರಪ್ಪ, ಆಶಾ ಕಾರ್ಯಕರ್ತೆಯರಾದ ಅರುಣಮ್ಮ, ಚಂದ್ರಮ್ಮ, ಅನಿತಾ ಮತ್ತಿತರರು ಉಪಸ್ಥಿತರಿದ್ದರು.