ಹಿಂಸಾ ಚಾರದಂತಹ ಅನವಶ್ಯಕ ಘಟನೆಗಳಿಂದ ಸಾವಿರಾರು ಉದ್ಯೋಗಿಗಳ ಜೀವನ ಬೀದಿಪಾಲಾಗುವ ಸಮಸ್ಯೆ ಎದುರಾಗುತ್ತದೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಹಿಂಸಾ ಚಾರದಂತಹ ಅನವಶ್ಯಕ ಘಟನೆಗಳಿಂದ ಸಾವಿರಾರು ಉದ್ಯೋಗಿಗಳ ಜೀವನ ಬೀದಿಪಾಲಾಗುವ ಸಮಸ್ಯೆ ಎದುರಾಗುತ್ತದೆ . ಇನ್ನು ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಅವರು ವಿಸ್ಸಾನ್ ಕಂಪನಿ ಉದ್ಯೋಗಿಗಳಿಗೆ ಸಲಹೆ ನೀಡಿದರು . ಇತ್ತೀಚಿನ ಘಟನೆಯ ನಂತರ ಉತ್ಪಾದನೆ ಆರಂಭಿಸಿರುವ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಕಾನ್ ಕಂಪನಿಗೆ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು . ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು ಕಾರ್ಮಿಕರ ಈಗಿನ ಸ್ಥಿತಿಗತಿಯ ಬಗ್ಗೆ ವಿಚಾರಿಸಿದರು . ಕಾರ್ಮಿಕರು ಕೆಲವೇ ಜನರ ಮುಂಗೋಪದಿಂದಾಗಿ ಸಾವಿರಾರು ಕಾರ್ಮಿಕರು ಸಮಸ್ಯೆ ಅನುಭವಿಸಬೇಕಾಯಿತು ಎಂದು ಅಂದು ನಡೆದ ಪರಿಸ್ಥಿತಿಯನ್ನು ಸಚಿವರ ಮುಂದೆ ವಿವರಿಸಿದರು . ನಂತರ ಸಚಿವರು ಮಾತನಾಡಿ , ಹಿಂಸಾಚಾರದಂತಹ ಅನವಶ್ಯಕ ಘಟನೆಗಳಿಂದ ಯಾವುದೇ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ . ಅಂದು ನಡೆದ ಘಟನೆಯಿಂದಾಗಿ ಕಾರ್ಖಾನೆ ಮುಚ್ಚಬೇಕಾಯಿತು . ಅಲ್ಲದೆ , ಸಾವಿರಾರು ಕಾರ್ಮಿಕರು ಅನವಶ್ಯಕವಾಗಿ ಗೊಂದಲಕ್ಕೀಡಾಗಬೇಕಾಯಿತು . ಆದ್ದರಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಲ್ಲಿ ನಿಮ್ಮ ಮೇಲಾಧಿಕಾರಿಗಳಿಗೆ ಮೊದಲು ತಿಳಿಸಬೇಕು . ಅಲ್ಲಿಯೂ ಪರಿಹಾರ ದೊರಕದೇ ಇದ್ದ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು .10 ವರ್ಷಗಳ ಹಿಂದೆ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನರು ಉದ್ಯೋಗಕ್ಕಾಗಿ ಬೆಂಗಳೂರು ನಗರಕ್ಕೆ ದಿನ ನಿತ್ಯ ಅಲೆದಾಡುತ್ತಿದ್ದ ಪರಿಸ್ಥಿತಿ ಇತ್ತು . ಈಗ ಜಿಲ್ಲೆಗೆ ಕೈಗಾರಿಕೆಗಳು ಹೆಚ್ಚಾಗಿ ಬರುತ್ತಿದ್ದು , ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ . ಇದನ್ನು ಅಭಿವೃದ್ದಿ ಪಡಿಸಬೇಕೇ ಹೊರತು ಇಂತಹ ಘಟನೆಗಳಿಂದ ಕೆಟ್ಟ ಅಭಿಪ್ರಾಯ ಮೂಡಿಸುವಂತಾಗಬಾರದು ಎಂದು ಹೇಳಿದರು . ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಗೌರವ್ ಗುಪ್ತಾ ಅವರು ಮಾತನಾಡಿ , ಸಮಸ್ಯೆ ಉದ್ಭವವಾಗುವ ಸಮಯದಲ್ಲಿ ಅಧಿಕಾರಿಗಳು ಭೇಟಿ ನೀಡುವ ಪರಿಪಾಠವನ್ನು ಬಿಡಬೇಕು . ಆಗಾಗ್ಗೆ ಕೈಗಾರಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳು ಹಾಗೂ ಆಗಬೇಕಾದ ಕಾರ್ಯಗಳ ಬಗ್ಗೆ ಸಲಹೆ ನೀಡಬೇಕು ಮತ್ತು ಕಾರ್ಮಿಕರ ಸಂಕಷ್ಟಗಳನ್ನು ಆಲಿಸಬೇಕು ಎಂದು ಸೂಚನೆ ನೀಡಿದರು . ಈ ಸಮಯದಲ್ಲಿ ಕೆಐಎಡಿಬಿ ಸಿಇಓ ಡಾ . ಶಿವಶಂಕರ್ , ಕೈಗಾರಿಕಾಭಿವೃದ್ಧಿ ಆಯುಕ್ತ ಶ್ರೀಮತಿ ಗುಂಜನ್ ಕೃಷ್ಣಾ , ವಿಸ್ಕಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದಿಪ್ರೋ ಗುಪ್ತಾ , ಕೋಲಾರ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಕೆಐಎಡಿಬಿ ಮುಖ್ಯ ಇಂಜಿನೀಯರ್ ಬಿ.ಕೆ ಪವಿತ್ರ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.