ರಾಜ್ಯದಾದ್ಯಂತ ನಡೆದ ಎಫ್.ಡಿ.ಎ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ವಿರೋಧಿಸಿ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ರಾಜ್ಯದಾದ್ಯಂತ ನಡೆದ ಎಫ್.ಡಿ.ಎ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ವಿರೋಧಿಸಿ ವಿವೇಕ್‍ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ, ಸ್ಪರ್ಧಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಸೇರಿ ನಗರದ ಗಾಂಧಿವನದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಫ್.ಡಿ.ಎ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಕೀ ಉತ್ತರಗಳು ವಿಜಯಪುರದ ಕಾಲೇಜೊಂದರಲ್ಲಿ ದೊರೆತಿರುವ ವಿಡಿಯೋಗಳು ಮೊಬೈಲ್‍ಗಳಲ್ಲಿ ಹರಿದಾಡುತ್ತಿದೆ. ಈ ರೀತಿ ಪ್ರಶ್ನೆಪತ್ರಿಕೆ ಸೋರಿಕೆಯು ಪದೇ ಪದೇ ಆಗುತ್ತಿದ್ದು ಪ್ರಾಮಾಣಿಕವಾಗಿ ಓದಿ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ರೀತಿಯಾಗಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಶಾಮೀಲಾಗಿರುವವರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಲಾಯಿತು.
ಈ ಹಿಂದೆಯೂ ಎಫ್.ಡಿ.ಎ ಪರೀಕ್ಷೆಯಲ್ಲಿ ಇದೇ ರೀತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗ ಪರೀಕ್ಷೆಯನ್ನು ಮುಂದೂಡಿ ನಂತರ ದಿನಾಂಕವನ್ನು ನಿಗಧಿ ಪಡಿಸಲಾಗಿತ್ತು. ಈ ಪರೀಕ್ಷೆಯನ್ನು ರಾಜ್ಯದಾಧ್ಯಂತ ಸಾಕಷ್ಟು ಆಕಾಂಕ್ಷಿಗಳು ಬರೆದಿದ್ದಾರೆ. ಆದರೆ ಮತ್ತೆ ಪ್ರಶ್ನೆಪತ್ರಿಕೆ ಸೋರಿಕೆಯ ವಿಚಾರದಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಸ್ಪರ್ಧಾರ್ಥಿಗಳಿಗೆ ಮೋಸವಾಗಿದೆ. ಈ ಸಂಬಂಧ ಈಗಾಗಲೇ ನಡೆಸಿರುವ ಎಫ್.ಡಿ.ಎ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆಯನ್ನು ನಡೆಸಬೇಕು ಎಂದು ಒತ್ತಾಯಿಸಲಾಯಿತು.
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಶಾಮೀಲಾಗಿರುವವರನ್ನು ಬಂಧಿಸಿ ಅವರ ಮೇಲೆ ಶಿಸ್ತು ಕ್ರಮವನ್ನು ಜರುಗಿಸುವುದಕ್ಕೆ ಮೊದಲು ಕೆ.ಪಿ.ಎಸ್.ಸಿ ಯಾವುದೇ ಪರೀಕ್ಷೆಗಳನ್ನು ಕೈಗೊಳ್ಳಬಾರದು. ಅಷ್ಟೇ ಅಲ್ಲದೆ ಕೆ.ಪಿ.ಎಸ್.ಸಿ ಯಲ್ಲಿ ಕೆಲವು ವರ್ಷಗಳಿಂದ ಬೇರು ಬಿಟ್ಟಿರುವ ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು. ಈ ವಿಷಯದಲ್ಲಿ ಸರ್ಕಾರವು ಕೆ.ಪಿ.ಎಸ್.ಸಿ ಯ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಉದ್ಯೋಗಾಕಾಂಕ್ಷಿಗಳ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಎಫ್.ಡಿ.ಎ ಪರೀಕ್ಷೆಯನ್ನು ಸಾಕಷ್ಟು ಅರ್ಹ ಅಭ್ಯರ್ಥಿಗಳು ಬರೆಯುತ್ತಾರೆ. ಹಾಗಾಗಿ ಅವರಿಗೆಲ್ಲಾ ಅನುಕೂಲವಾಗುವಂತೆ ಪ್ರಶ್ನೆಪತ್ರಿಕೆಯನ್ನು ಸಿದ್ದ ಮಾಡಬೇಕು. ಈ ಬಾರಿ ನಡೆದಿರುವ ಪರೀಕ್ಷೆಯಲ್ಲಿ ಪತ್ರಿಕೆಯುವಿಜ್ಞಾನಮಯವಾಗಿದೆ. ಇದರಿಂದ ಕೆಲವು ಅಭ್ಯರ್ಥಿಗಳಿಗೆ ಅನುಕೂಲವಾದರೆ ಇನ್ನೂ ರಾಜ್ಯ ಪಠ್ಯಕ್ರಮದ ಅಭ್ಯರ್ಥಿಗಳಿಗೆ ಅನಾನುಕೂಲವಾಗುತ್ತದೆ. ಹಾಗಾಗಿ ಕೆ.ಪಿ.ಎಸ್.ಸಿ ಪ್ರಶ್ನೆಪತ್ರಿಕೆಯನ್ನು ಸಿದ್ದಪಡಿಸುವಾಗ ಎಲ್ಲಾ ವರ್ಗದ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಮಾನ ಪ್ರಾಶಸ್ಯವನ್ನು ನೀಡಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ವಿವೇಕ್ ಇನ್ಫೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್‍ಕುಮಾರ್, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ, ವಿವಿಧ ಕ್ಷೇತ್ರದ ಮುಖಂಡರಾದ ಭಾನುಪ್ರಕಾಶ್, ಜನ್ನಘಟ್ಟ ನವೀನ್, ಯಾನಾದಳ್ಳಿ ಮಂಜುನಾಥ್, ಸಿಂಗೊಂಡಹಳ್ಳಿ ಸುನೀಲ್‍ಕುಮಾರ್, ಕಿರಣ್, ಚಲಪತಿ, ಗಣೇಶ್, ಜನೈದ್, ನಿಜಾಮುದ್ದೀನ್, ಸಮರಾನ್, ವಸೀಂ, ಶಶಿ, ಮಂಜುನಾಥ್‍ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು
.