ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವಲ್ಲಿ ಸಿನಿಮಾಗಳ ಪಾತ್ರ ಬಹಳವಿದೆ – ಡಾ. ಮೋಹನ್ ಆಳ್ವ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಆಡುಭಾಷೆಯಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡ ಭಾಷೆ ಬಹು ಆಯಾಮಗಳಿಂದ ತುಂಬಾ ಶ್ರೀಮಂತ ಭಾಷೆಯಾಗಿದೆ. ಈ ಭಾಷೆಯ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವಲ್ಲಿ ಸಿನಿಮಾ ಮಾಧ್ಯಮದ ಪಾತ್ರ ಬಹಳವಾಗಿದೆ. ಸಮಾಜದ ಮೇಲೆ ಶೀಘ್ರ ಪರಿಣಾಮ ಬೀರಬಲ್ಲ ಸಿನಿಮಾಗಳಲ್ಲಿ ಭಾಷೆಯನ್ನು ಬಳಸುವಾಗ ನಿರ್ದೇಶಕರು ಬಹು ಜಾಗರೂಕರಾಗಿರಬೇಕು. ಮಹಾಭಾರತ ಎಂಬುದನ್ನು ಹೆಸರಲ್ಲಿ ಹೊಂದಿದ್ದರೂ ವಿವಾದವಿಲ್ಲದಂತೆ ಸಾಂಸಾರಿಕ ವಿಷಯಗಳನ್ನು ಜನರಿಗೆ ತಿಳಿಸಲು ಮೋಡರ್ನ್ ಮಹಾಭಾರತ ಚಿತ್ರ ನಿರ್ದೇಶಕ ಶ್ರೀಧರ ಉಡುಪರು ಯಶಸ್ವಿಯಾಗಿದ್ದಾರೆ. ಈಗಾಗಲೇ ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಈ ಸಿನಿಮಾ ಯಶಸ್ವಿಯಾಗಲಿ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಹಾರೈಸಿದರು.
ಕೋಟೇಶ್ವರದ ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲಿ ಗಣ್ಯರ ಸಮಕ್ಷಮದಲ್ಲಿ ನಡೆದ, ಎಸ್. ವಿ. ಫಿಲ್ಮ್ ಪ್ರೊಡಕ್ಷನ್ಸ್ ನವರ, ಯುವ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪ ನಿರ್ದೇಶಿಸಿದ ಮೋಡರ್ನ್ ಮಹಾಭಾರತ ಕನ್ನಡ ಸಿನಿಮಾದ ಪ್ರಿಮಿಯರ್ ಶೋ ಉದ್ಘಾಟಿಸಿ ಅವರು ಶುಭ ಹಾರೈಸಿದರು.
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಧರ್ಮ, ಜಾತಿ ಅಥವಾ ಉದ್ಯೋಗಗಳ ನಿಂದನೆ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಿನಿಮಾಗಳು ಸಮಾಜದ ಓರೆಕೋರೆಗಳನ್ನು ತಿದ್ದಿ ಒಳ್ಳೆಯ ಸಂದೇಶಗಳನ್ನು ನೀಡುವ ಯತ್ನ ಮಾಡಬೇಕೇ ಹೊರತು ಅಶಾಂತಿ ಸೃಷ್ಟಿಸಬಾರದು. ಜನಾಭಿಪ್ರಾಯ ರೂಪಿಸುವಲ್ಲಿ ಇದೊಂದು ಪ್ರಬಲ ಮಾಧ್ಯಮ ಎಂಬುದನ್ನು ಸಿನಿಮಾ ಮಂದಿ ಅರಿಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸಮಿತಿ ಸದಸ್ಯ ಗಣೇಶ್ ಕಿಣಿ, ಬೆಳ್ವೆ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಶೆಟ್ಟಿ ಮೋಡರ್ನ್ ಮಹಾಭಾರತ ಚಿತ್ರಕ್ಕೆ ಶುಭಹಾರೈಸಿದರು.
ಮೋಡರ್ನ್ ಮಹಾಭಾರತ ಸಿನಿಮಾ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪ ಸ್ವಾಗತಿಸಿ, ಚಿತ್ರದ ಬಗ್ಗೆ ಕಿರು ಪರಿಚಯ ನೀಡಿದರು. ಚಿತ್ರ ನಿರ್ಮಾಪಕರಾದ ಅನಂತ ಪದ್ಮನಾಭ ಉಡುಪ, ಡಾ. ರಾಮಕೃಷ್ಣ ಉಡುಪ, ಭಾರತ್ ಸಿನಿಮಾಸ್ ನ ಬಾಲಕೃಷ್ಣ ಶೆಟ್ಟಿ ಹಾಗೂ ಚಿತ್ರ ತಂಡದವರು ಉಪಸ್ಥಿತರಿದ್ದರು. ಕ. ಸಾ. ಪ. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ, ಕೆ. ಜಿ. ವೈದ್ಯ ವಂದಿಸಿದರು.