ಸೊಸೈಟಿಗಳು ಪಡಿತರ ವಿತರಣೆಗೆ ಸೀಮಿತವಾಗದಿರಲಿ ; ಹಳ್ಳಿಗರ ಆರ್ಥಿಕ ಶಕ್ತಿಯಾಗಬೇಕು-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸೊಸೈಟಿಗಳು ಪಡಿತರ ವಿತರಣೆಗೆ ಸೀಮಿತವಾಗದೇ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಹಳ್ಳಿಗಳ ರೈತರು, ಬಡವರು,ಮಹಿಳೆಯರಿಗೆ ಸಾಲ ನೀಡುವ ಮೂಲಕ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಿವಿಮಾತು ಹೇಳಿದರು.
ತಾಲ್ಲೂಕಿನ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಂಗಳವಾರ ಅಭಿನಂದಿಸಿ ಮಾತನಾಡಿದರು.
ರೈತರು,ಮಹಿಳೆಯರ ಪರ ಕಾಳಜಿ, ಮನೆಬಾಗಿಲಿಗೆ ಸಾಲ ತಲುಪಿಸುವ ಡಿಸಿಸಿ ಬ್ಯಾಂಕಿನ ಬದ್ದತೆಯಿಂದಾಗಿ ಬ್ಯಾಂಕ್ ಮೇಲೆ ಇಂದು ಜನರ ನಂಬಿಕೆ ಬಲಗೊಂಡಿದೆ ಎಂದ ಅವರು, ಜನರು ವಾಣಿಜ್ಯ ಬ್ಯಾಂಕ್‍ಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಎರಡೂ ಜಿಲ್ಲೆಯ ರೈತರ ಹಾಗೂ ಮಹಿಳೆಯರ ಮನೆಮಾತಾಗಿದೆ. ಬೆಳೆ ಸಾಲ, ಸ್ತ್ರೀಶಕ್ತಿ ಸಂಘಗಳಿಗೆ ಸಾಲಗಳು ಮಾತ್ರವಲ್ಲ, ಜನರ ಬ್ಯಾಂಕಿಂಗ್ ವಹಿವಾಟಿಗೆ ಮೈಕ್ರೋಎಟಿಎಂ, ಸಂಚಾರಿ ಬ್ಯಾಂಕಿಂಗ್ ಸೇವೆಯ ಮೂಲಕ ಜನರ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುತ್ತಿದೆ ಎಂದರು.
ಗ್ರಾಹಕನ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಧ್ಯೇಯದಡಿ ಆಡಳಿತ ಮಂಡಳಿ, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸೋಸೈಟಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಬ್ಯಾಂಕಿನಿಂದ ಮೊಬೈಲ್ ಬ್ಯಾಂಕ್ ಸೇವೆಯಿಂದಾಗಿ ಗ್ರಾಗಳಿಗೆ ಬ್ಯಾಂಕ್ ವಾಹನ ಬರುತ್ತದೆ, ಜನ ಅಲ್ಲೇ ಹಣ ಡ್ರಾ,ಸಂದಾಯ ಎರಡೂ ಮಾಡಬಹುದು, ಇದರ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂದರು.
ರೈತರು ಸಹಕಾರಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಮಾಡಿಸಬೇಕು. ಸೋಸೈಟಿ ವ್ಯಾಪ್ತಿಗೆ ಬರುವ ಹಳ್ಳಿಗಳ ಹಾಲು ಸಹಕಾರ ಸಂಘಗಳ ವಹಿವಾಟು ಬ್ಯಾಂಕಿನಲ್ಲಿ ನಡೆಸುವಂತಾಗಬೇಕು ಎಂದು ತಿಳಿಸಿದರು.
ಕಿಸಾನ್ ಲಕ್ಷ್ಮಿ ಬಾಂಡ್ ಯೋಜನೆಯಡಿ ಮಹಿಳೆಯರಿಂದ ಠೇವಣಿ ಸಂಗ್ರಹಿಸಬೇಕು. ಜೊತೆಗೆ ಆಡಳಿತ ಮಂಡಳಿಯವರು ಠೇವಣಿ ಸಂಗ್ರಹದ ಗುರಿ ಹಾಕಿಕೊಂಡು ಮಾರ್ಚ್ ತಿಂಗಳ ಅಂತ್ಯದೊಳಗೆ ಗುರಿ ಸಾಧನೆಗೆ ಒತ್ತು ನೀಡಬೇಕು. ಠೇವಣಿ ಸಂಗ್ರಹದಿಂದ ಸರ್ಕಾರದಿಂದ ಹೆಚ್ಚಿನ ಸೌಕರ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಗ್ರಾಮೀಣ ಜನಕ್ಕೆ ಬ್ಯಾಂಕ್ ಎಂದರೆ ಮೊದಲು ನೆನಪಿಗೆ ಬರುವುದು ಡಿಸಿಸಿ ಬ್ಯಾಂಕ್. ಈ ನಂಬಿಕೆಯಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ಸೊಸೈಟಿಗಳ ಮೇಲಿದೆ ಎಂದು ತಿಳಿಸಿದರು.
ವಕ್ಕಲೇರಿ ಸೋಸೈಟಿ ಅಧ್ಯಕ್ಷ ಪಾಲಾಕ್ಷಗೌಡ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಎಂ.ಆನಂದ್ ಕುಮಾರ್, ಚಂದ್ರೇಗೌಡ, ಚಿದಾನಂದಗೌಡ, ವೆಂಕಟಗಿರಿಯಪ್ಪ, ರಮೇಶ್, ಅಣ್ಣಿಹಳ್ಳಿ ಸೋಸೈಟಿ ಅಧ್ಯಕ್ಷ ನಾಗರಾಜ್, ಪ್ರತಿಪರ ರೈತ ಚಂದ್ರಶೇಖರ್ ಹಾಜರಿದ್ದರು.