ಊಟ ಬೇಡ ರಾಮಮಂದಿರ ಕಟ್ಟದರೆ ಸಾಕು ಅನ್ನೋರ ಕೈಗೆ ಅಧಿಕಾರ ರೈತರಿಗೆ ಗೌರವ ನೀಡದಿರೋದು ಒಂದು ದೇಶವೇ-ರಮೇಶ್‍ಕುಮಾರ್ ಕಿಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಉಪವಾಸ ಇರೋನಿಗೆ ಊಟ ಬೇಡ, ಊರಿಗೆ ಶಾಲೆ ಬೇಡ ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತೋರಿಗೆ ಈ ದೇಶ ಆಳಲು ಬಿಟ್ಟಿದ್ದೇವೆ, ರೈತರು, ಸೈನಿಕರು ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಸುಗಟೂರು ಸೊಸೈಟಿ ಆಶ್ರಯದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ರೈತರಿಗೆ 1.97 ಕೋಟಿ ರೂ ಶೂನ್ಯ ಬಡ್ಡಿಯ ಕೆಸಿಸಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ದೆಹಲಿ ರೈತರ ಹೋರಾಟದ ಕುರಿತು ಮಾತನಾಡಿದ ಅವರು, ಮಾಧ್ಯಮಗಳು ಒಂದು ಲಕ್ಷ ಟ್ರಾಕ್ಟರ್ ಒಂದೆಡೆ ಸೇರಿಸುವ ರೈತರ ನೋವಿನ ಕುರಿತು ಸುದ್ದಿ ಮಾಡುತ್ತಿಲ್ಲ, ಕೇವಲ ಯಾವೊನೋ ಒಬ್ಬ ಕಿಡಿಗೇಡಿ ಕೆಂಪುಕೋಟೆ ಮೇಲೆ ಬಾವುಟ ಹಾಕಿದ್ದನ್ನು ಪದೆಪದೇ ತೋರಿಸುತ್ತಿವೆ ಎಂದು ಟೀಕಿಸಿದರು.
ದೆಹಲಿಯಲ್ಲಿ ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಲಾಗಿದೆ, ರೈತರಿರುವ ಏರಿಯಾದಲ್ಲಿ ಕರೆಂಟ್, ನೀರು ಕಟ್ ಮಾಡಲಾಗಿದೆ, ನಾಳೆಯೊಳಗೆ ಘಾಜಿಪುರ ಗಡಿಯಲ್ಲಿ 10 ಲಕ್ಷ ರೈತರು ಸೇರುತ್ತಿದ್ದಾರೆ ಇದು ರೈತರ ಶಕ್ತಿ ಎಂದರು.


ಹರಿದಪಂಚೆ,ನಿಕ್ಕರ್‍ಗೆ ಸಾಲ ನೀಡೋದಿಲ್ಲ


ವಾಣಿಜ್ಯ ಬ್ಯಾಂಕುಗಳಿಗೆ ಬಡ ರೈತರು ಹರಿದ ಪಂಚೆ,ನಿಕ್ಕರ್ ಹಾಕಿಕೊಂಡು ಹೋದರೆ ಒಳಗೂ ಬಿಡೋದಿಲ್ಲ, ಸಾಲ ಕೇಳಿದರೆ ಚಿನ್ನ,ಭೂಮಿ ಅಡ ಇಡಬೇಕು, ಸಮಯಕ್ಕೆ ಸಾಲ ತೀರಿಸದಿದ್ದರೆ ಮನೆಮುಂದೆ ತಮಟೆ ಬಾರಿಸುತ್ತಾರೆ, ರೈತರು ಮರ್ಯಾದೆಗೆ ಅಂಜಿ ವಿಷ ಸೇವಿಸಿ ಸಾಯಬೇಕು ಅಂತಹ ಪರಿಸ್ಥಿತಿ ನಿರ್ಮಿಸುತ್ತಾರೆ ಎಂದರು.
ವಾಣಿಜ್ಯ ಬ್ಯಾಂಕು ಸಾಲ ನೀಡೋದು ಭದ್ರತೆ ನೀಡದೇ ಬಿಳಿಬಟ್ಟೆ ಹಾಕಿಕೊಂಡು ಕಾರಿನಲ್ಲಿ ಬಂದು ಸಾಲ ಪಡೆದು ಮುಳುಗಿಸುವ ಮಲ್ಯರಂತಹವರಿಗೆ ಎಂದು ಟೀಕಿಸಿ, ಚೆನ್ನಾಗಿ ಡ್ರೆಸ್ ಮಾಡಿಕೊಂಡು ಟೋಪಿ ಹಾಕುವವರಿಗೆ ಮಾತ್ರ ಸಾಲ ಅಲ್ಲಿ ಸಿಗೋದು ಎಂದರು.


ಗೌರವದಿಂದರಲು ಡಿಸಿಸಿಬ್ಯಾಂಕ್ ಉಳಿಸಿ


ರೈತರು,ಮಹಿಳೆಯರನ್ನು ಕರೆದು ಕೂರಿಸಿ ಬಡ್ಡಿರಹಿತ ಸಾಲ ನೀಡುವ ಡಿಸಿಸಿ ಬ್ಯಾಂಕಿನಲ್ಲೇ ನಿಮ್ಮ ಉಳಿತಾಯದ ಹಣ ಇಡಿ, ಇದು ಜನರ ಬ್ಯಾಂಕ್, ನಿಮ್ಮ ಹಣಕ್ಕೆ ಅವರಿಗಿಂತ ಹೆಚ್ಚು ಬಡ್ಡಿ ಕೊಡ್ತೇವೆ ಎಂದು ಕಿವಿಮಾತು ಹೇಳಿದರು.
ಸೊಸೈಟಿ ಅಧ್ಯಕ್ಷ ತಿಮ್ಮರಾಯಪ್ಪ ಅಧ್ಯಕ್ಷತೆಯಲ್ಲಿ ಸುಗಟೂರು ಎಸ್‍ಎಫ್‍ಸಿಎಸ್ ಎತ್ತರಕ್ಕೆ ಬೆಳೆಯಬೇಕು,ರಾಜಕೀಯ ಬೇಡ, ರೈತರು,ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಸಾಲ ನೀಡುವ ಶಕ್ತಿ ಮತ್ತಷ್ಟು ಹೆಚ್ಚಿಸಿಕೊಳ್ಳಿ, 35 ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದೀರಿ, ಲಾಭದತ್ತ ತಂದಿದ್ದಾರೆ ಇನ್ನೇನು ಬೇಕು ಎಂದರು.


ಬ್ಯಾಂಕಿಗೆ ವಂಚಿಸುವ ಪಾಪದಕೆಲಸ ಬೇಡ


ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷತೆ ವಹಿಸಿದ್ದು, ಬ್ಯಾಂಕಿನ ವಿಷಯದಲ್ಲಿ ಹೆಣ್ಣು ಮಕ್ಕಳಿಗಿರುವ ಬದ್ದತೆ ಪುರುಷರಿಗೆ ಇಲ್ಲವಾಗಿದೆ, ನಮ್ಮಿಂದ ಬಡ್ಡಿರಹಿತ ಸಾಲ ಪಡೆದು ಅದನ್ನು ವಾಣಿಜ್ಯ ಬ್ಯಾಂಕಿನಲ್ಲಿ ಠೇವಣಿ ಇಡೋದು ಪಾಪದ ಕೆಲಸ ಇದು ಖಂಡನೀಯ ಎಂದರು.
ಡಿಸಿಸಿ ಬ್ಯಾಂಕ್ ಬಡವರ ಸ್ವತ್ತು, ಅದು ನಮ್ಮ ಯಾರ ಆಸ್ತಿಯೂ ಅಲ್ಲ, ತಾಯಂದಿರಿಗೆ ಕಾಯಕ ಯೋಜನೆಯಡಿ ತಲಾ 1 ಲಕ್ಷ ಸಾಲ ನೀಡಲಾಗುವುದು, ರೈತರು ಮಹಿಳೆಯರ ಮಾದರಿಯಲ್ಲೇ ಬ್ಯಾಂಕಿನ ಬಗ್ಗೆ ಕಳಕಳಿ ಹೊಂದಬೇಕು ಎಂದರು.
ಸುಗಟೂರು ಸೊಸೈಟಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸಿಕೊಡುವಂತೆ ಶಾಸಕ ರಮೇಶ್‍ಕುಮಾರ್ ಅವರನ್ನು ಕೋರಿದ ಅವರು, ತಿಮ್ಮರಾಯಪ್ಪ ಅಧ್ಯಕ್ಷರಾಗಿರುವಾಗಲೇ ಕಟ್ಟಡ ನಿರ್ಮಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಸುಗಟೂರು ಸೊಸೈಟಿ ಅಧ್ಯಕ್ಷ ತಿಮ್ಮರಾಯಪ್ಪ, ಕೇವಲ ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿ ಇಂದು ಮಹಿಳೆಯರಿಗೆ 30 ಕೋಟಿ ಸಾಲ ನೀಡಿದೆ, ರೈತರಿಗೂ6.50 ಕೋಟಿವರೆಗೂ ಸಾಲ ಒದಗಿಸಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‍ಕುಮಾರ್, ನಾಗನಾಳಸೋಮಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್,ಗ್ರಾ.ಪಂ ಸದಸ್ಯರಾದ ರವಿ,ಭೂಪತಿಗೌಡ, ಸೊಸೈಟಿ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ವೆಂಕಟರಾಮೇಗೌಡ,ಭಾಸ್ಕರ್, ಹನುಮೇಗೌಡ, ಸವಿತ ನಾಗೇಂದ್ರಶೆಟ್ಟಿ, ಗೋಪಾಲಪ್ಪ, ವೆಂಕಟರವಣಪ್ಪ, ರಮಣಾರೆಡ್ಡಿ, ಅಮರನಾರಾಯಣ,ಮುಖಂಡರಾದ ವಿಶ್ವನಾಥ್,ರಮೇಶ್, ಸಿರಾಜ್,ಸೊಸೈಟಿ ಸಿಇಒ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು

.