ಕೋಲಾರ:ದೂರ ಸಂಪರ್ಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಬಿಎಸ್‍ಎನ್‍ಎಲ್ ಕಂಪನಿಯ ಅವ್ಯವಸ್ಥೆಯನ್ನು ಸರಿಪಡಿಸಲು ಬಿಎಸ್‍ಎನ್‍ಎಲ್ ಕಚೇರಿಗೆ ಮುತ್ತಿಗೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ದೂರ ಸಂಪರ್ಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಬಿಎಸ್‍ಎನ್‍ಎಲ್ ಕಂಪನಿಯ ಅವ್ಯವಸ್ಥೆಯನ್ನು ಸರಿಪಡಿಸಿ ಸಮರ್ಪಕವಾದ ನೆಟ್‍ವರ್ಕ್ ಸೇವೆಯನ್ನು ಒದಗಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ಗುರುವಾರ ನಗರದ ಬಿಎಸ್‍ಎನ್‍ಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಕೃತಿಯೊಂದಿಗೆ ಪ್ರತಿಭಟನೆ ನಡೆಸಲು ಮುಂದಾದಾಗ ಅಧಿಕಾರಿಗಳು, ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿಗಳಾದ ಘಟನೆ ಜರುಗಿತು.
ಸಮರ್ಪಕವಾದ ಸೇವೆ ಸಲ್ಲಿಸಲು ಸಾಧ್ಯವಾಗದಿದ್ದರೆ ಕಚೇರಿಗೆ ಬೀಗ ಹಾಕಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರಿಂದಾಗಿ ಅಧಿಕಾರಿಗಳು ಮಾತಿನ ಚಕಮಕಿಗೆ ಮುಂದಾದರು ಇದರಿಂದಾಗಿ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಇತಿಹಾಸದಲ್ಲಿ ದೂರ ಸಂಪರ್ಕ ಕ್ಷೇತ್ರದಲ್ಲಿ ತನ್ನದೇ ಆದ ದೊಡ್ಡ ಮಟ್ಟದ ಹೆಸರು ಮಾಡಿ ಗ್ರಾಮೀಣ ಪ್ರದೇಶಗಳ ಮೂಲೆ ಮೂಲೆಯಲ್ಲಿಯೂ ಸಾರ್ವಜನಿಕರು ಮತ್ತು ಎಲ್ಲಾ ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಬಿಎಸ್‍ಎನ್‍ಎಲ್ ದೂರ ಸಂಪರ್ಕ ಕೇಂದ್ರವನ್ನೇ ಅವಲಂಭಿಸಿ ಇತಿಹಾಸ ಸೃಷ್ಟಿಸಿದ್ದ ಬಿಎಸ್‍ಎನ್‍ಎಲ್ ಇಂದು ಖಾಸಗಿ ದೂರ ಸಂಪರ್ಕ ಕೇಂದ್ರಗಳಿಗೆ ತನ್ನ ಅಸ್ತಿತ್ವವನ್ನು ಅಡ ಇಟ್ಟಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನೇದಿನೇ ದೇಶದ ವಿವಿಧ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರ ಬಿಎಎನ್‍ಎಲ್ ಕಂಪನಿಯನ್ನು ಖಾಸಗೀಕರಣ ಮಾಡಲು ಮುಂದಾಗಿದೆಯೇ ಇತ್ತೀಚಿನ ಯುವ ಜನತೆಗೆ ಅವಶ್ಯಕತೆಯಿರುವ ಅತಿ ವೇಗದ ನೆಟ್ ಪ್ರಮುಖವಾಗಿ 4ಜಿ, 5ಜಿ ನೀಡಲು ವಿಫಲವಾಗಿದೆಯೇ. ಈ ದೂರ ಸಂಪರ್ಕ ಕೇಂದ್ರದ ಅವ್ಯವಸ್ಥೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಂಬಾನಿ ಹೊಡೆತನದ ಜಿಯೋ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಅನ್ನು ಮುಗಿಸುವ ಹುನ್ನಾರ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು.
ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಉಪಯೋಗಿಸುವ ಬಿಎಸಎನ್‍ಎಲ್ ನೆಟ್‍ವರ್ಕ್ ಸಮಸ್ಯೆಯಿಂದ ಪಕ್ಕದಲ್ಲಿದ್ದರೂ ಕರೆ ಮಾಡಿದರೆ ನಾಟ್ ರೀಚಬಲ್, ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆಂದು ಸಂದೇಶ ಬರುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ಒಡೆತನದ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಉಪಯೋಗಿಸುತ್ತಿರುವುದರಿಂದಾಗಿ ಎಲ್ಲೆಡೆ ಸರ್ವರ್ ಸಮಸ್ಯೆ ಸಾಮಾನ್ಯವಾಗಿದೆ. ಜನಸಾಮಾನ್ಯರು, ರೈತರು ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಹಾಗೂ ನೋಂದಣಿ ಕಂದಾಯ ಮತ್ತಿತರರ ಇಲಾಖೆಗಳಲ್ಲಿ ಸರ್ವರ್ ಸಮಸ್ಯೆಯಿಂದ ಪ್ರತಿನಿತ್ಯ ಗಂಟೆಗಟ್ಟಲೇ ಕಾಯುವ ಜೊತೆಗೆ ಅಧಿಕಾರಿಗಳ ಜೊತೆಗೆ ಗಲಾಟೆಗಳು ಆಗುವ ಮಟ್ಟಕ್ಕೆ ನೆಟ್‍ವರ್ಕ್ ಹದಗೆಟ್ಟಿದೆ.
ಆದ್ದರಿಂದ ಮಾನ್ಯ ವ್ಯವಸ್ಥಾಪಕರು ದೂರ ಸಂಪರ್ಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆಗೆ ಕಾರಣಗಳನ್ನು ತಿಳಿದು ದಿನದ 24 ಗಂಟೆ ಸರ್ವರ್ ಸಮಸ್ಯೆಯಿಲ್ಲದೆ ಕೆಲಸ ನಿರ್ವಹಿಸುವ ಸೌಲಭ್ಯವನ್ನು ಒದಗಿಸಿ ಜನಸಾಮಾನ್ಯರು ತಮ್ಮ ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಯನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬಿಎಸ್‍ಎನ್‍ಎಲ್ ಜಿಎಂಒ ಶ್ರೀನಿವಾಸಮೂರ್ತಿ ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಹೋರಾಟದಲ್ಲಿ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಕಿರಣ್, ವಕ್ಕಲೇರಿ ಹನುಮಯ್ಯ, ಅನಿಲ್, ಪ್ರವೀಣ್, ತೆರ್ನಹಳ್ಳಿ ಆಂಜಿನಪ್ಪ, ವಟ್ರಕುಂಟೆ ಮಂಜುನಾಥ್, ನಲ್ಲಾಂಡಹಳ್ಳಿ ಕೇಶವ, ಸುಪ್ರಿಂಚಲ, ಜಗದೀಶ್, ವಿನೋದ್, ಮಹೇಶ್ ಮುಂತಾದವರಿದ್ದರು
.