ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಜಾತ್ಯಾತೀತ ರಾಷ್ಟ್ರ, ಯುವಕರು ಮತದಾರದಿಂದ ಹೊರಗುಳಿಯಬಾರದು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಭಾರತ ದೇಶ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ , ಎಲ್ಲಾ ಜಾತಿ , ಧರ್ಮ ಭಾಷೆಗಳನ್ನೊಳಗೊಂಡ ಜಾತ್ಯಾತೀತ ರಾಷ್ಟ್ರ , ಯುವಕರು ಮತದಾರದಿಂದ ಹೊರಗುಳಿಯಬಾರದು . ಜನರಿಗೆ ಒಳಿತನ್ನು ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು . ಅಭಿವೃದ್ಧಿಗೆ ಪ್ರತಿ ಮತವು ಮುಖ್ಯ ಆದರಿಂದ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆರಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ ಚನ್ನಬಸಪ್ಪ ಹಡಪದ್ ಅವರು ತಿಳಿಸಿದರು . ಇಂದು ಕೋಲಾರ ನಗರದ ಶ್ರೀ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ , 11 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು . ಮತದಾನ ಮೂಲಭೂತ ಹಕ್ಕು , ಮತದಾನದ ಮಹತ್ವ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿ ಕುರಿತು ಜಾಗೃತಿ ಅವರು ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುವುದು . ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಾಗುತ್ತಿದೆ . ಮತದಾರರು ಮತದಾನದ ಮಹತ್ವವನ್ನು ತಿಳಿಯಬೇಕು . ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯುವಕರು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ 1989 ರಲ್ಲಿ ಇಳಿಸಲಾಯಿತು . ಚುನಾವಣೆ ಆಯೋಗವು ನ್ಯಾಯ ನಿರ್ಭಿತವಾಗಿ ಚುನಾವಣೆಯನ್ನು ನಡೆಸುತ್ತಿದೆ . ಚುನಾವಣಾ ಅಭ್ಯರ್ಥಿಗಳು ಯಾವುದೇ ಜಾತಿ ಮತ ಧರ್ಮದ ಮೇಲೆ ಮತ ಕೇಳುವಂತಿಲ್ಲ . 18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು . ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ , 2011 ರಿಂದ ಜನವರಿ 25 ರನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ . “ ಮತದಾರರನ್ನು ಅಧಿಕಾರಯುಕ್ತ , ಜಾಗರೂಕ , ಸುರಕ್ಷಿತ ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವುದು . ಈ ವರ್ಷದ ಮತದಾರರ ದಿನಾಚರಣೆಯ ಘೋಷವಾಕ್ಯವಾಗಿದೆ . ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು , ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುತ್ತಿದೆ . 12 ನೇ ಶತಮಾನದಲ್ಲಿಯೇ ಉತ್ತಮ ಪ್ರಜಾಪ್ರಭುತ್ವದ ವ್ಯವಸ್ಥೆ ಇತ್ತು . ಬಸವಣ್ಣನವರ ಅನುಭವ ಮಂಟಪ ಉತ್ತಮ ಸಂಸತ್ ಆಗಿತ್ತು . ಹಿಂದೆ ಅನಕ್ಷರಸ್ಥರು , ದಲಿತರು , ಮಹಿಳೆಯರು , ಹಿಂದುಳಿದವರು , ಭೂರಹಿತರು , ಇವರಿಗೆ ಮತದಾನ ಮಾಡಲು ಅವಕಾಶ ಇರಲಿಲ್ಲ . ಆದರೆ ನಮ್ಮ ಸಂವಿಧಾನ ಎಲ್ಲರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು . ಶ್ರೀಮಂತರೇ ಇರಲಿ , ಬಡವರೇ ಇರಲಿ ಎಲ್ಲರಿಗೂ ಒಂದೇ ಮತದ ಹಕ್ಕನ್ನು ನೀಡಲಾಗಿದೆ . ಪ್ರತಿ ವರ್ಷ ಜನವರಿ 1 ಕ್ಕೆ 18 ವರ್ಷ ತುಂಬಿದ ಎಲ್ಲರನ್ನೂ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲಾಗುವುದು . ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ನೀಡಲಾಗುವುದು ಜಿಲ್ಲೆಯಲ್ಲಿ 12,37,309 ಮತದಾರರಿದ್ದಾರೆ . ಇದರಲ್ಲಿ ಪುರುಷರು 6,18,139 ಹಾಗೂ ಮಹಿಳೆಯರು 6,19,170 ಮತದಾರರಿದ್ದಾರೆ . ಇದರಲ್ಲಿ 13,145 ಯುವ ಮತದಾರರನ್ನು ನೋಂದಣಿ ಮಾಡಲಾಗಿದೆ ಎಂದು ಮತದಾನದ ಶ್ರೇಷ್ಟತೆ ಬಗ್ಗೆ ಅರಿವು ಮೂಡಿಸಿದರು . ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಎನ್.ಎಂ.ನಾಗರಾಜ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು . ನಂತರ ಮಾತನಾಡಿ , ಭಾರತೀಯ ಚುನಾವಣಾ ಆಯೋಗ ಪ್ರಪಂಚದಲ್ಲೇ ಹೆಚ್ಚು ವಿಶ್ವಾಸನೀಯವಾಗಿದೆ . ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುತ್ತದೆ . ಬಿ.ಎಲ್.ಓ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು , ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು . ಪಟ್ಟಿಯಿಂದ ತೆಗೆದು ಹಾಕುವ ಕೆಲಸ ಉತ್ತಮವಾಗಿ ಮಾಡುತ್ತಿದ್ದಾರೆ . ಮತದಾರರ ಪಟ್ಟಿಯ ಲೋಪದೋಷಗಳನ್ನು ಬಿ.ಎಲ್.ಓಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು . ಮತದಾರರು ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಷ್ಟ ಇಲ್ಲದವರು ನೋಟಾ ಆಯ್ಕೆಗೆ ಮತ ಚಲಾಯಿಸಬಹುದಾಗಿದೆ . ರಹಸ್ಯ ಮತದಾನವನ್ನು ಎಲ್ಲರೂ ಪಾಲಿಸಬೇಕು . ಇದರಗಳು ಉಲ್ಲಂಘನೆಯಾದರೇ ಕಾನೂನು ಅಪರಾಧವಾಗುತ್ತದೆ . ಪೂರ್ವಗ್ರಹ ಪೀಡಿತರಾಗದೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು . ಕೋಲಾರ ಉಪ ವಿಭಾಗಾಧಿಕಾರಿಗಳಾದ ವಿ.ಸೋಮಶೇಖರ್ ಅವರು ಮಾತನಾಡಿ , ಮತದಾರರ ಪಟ್ಟಿ ಪಾರದರ್ಶಕವಾಗಿದ್ದರೆ ಮಾತ್ರ ಪ್ರಜಾಪ್ರಭತ್ವ ಯಶಸ್ವಿಯಾಗುತ್ತದೆ . 18 ವರ್ಷ ತುಂಬಿದ ಎಲ್ಲಾ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು . ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು . ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓ ಗಳಿಗೆ ಪ್ರಶಂಸನೀಯ ಪತ್ರ ಮತ್ತು ನಗದು ಬಹುಮಾನವನ್ನು ನೀಡಲಾಯಿತು . ಪ್ರೌಢಶಾಲೆ , ಕಾಲೇಜು ಹಂತಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ಗಳನ್ನು ಸ್ಥಾಪಿಸಿ ಸ್ಪರ್ಧೆಗಳನ್ನು ನಡೆಸಿದ್ದು , ಉತ್ತಮ ಮತದಾರರ ಸಾಕ್ಷರತಾ ಕ್ಲಬ್ಗಳಿಗೆ ಬಹುಮಾನ ವಿತರಣೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ತಹಶೀಲ್ದಾರರಾದ ಶೋಭಿತಾ , ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ , ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ತಿಮ್ಮಪ್ಪ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಮೂರ್ತಿ , ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಗಂಗಾಧರ್ ರಾವ್ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.