ಅರ್ಚಕರು ಹಾಗೂ ಆಗಮಿಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು : ತಹಶೀಲ್ದಾರ್ ಎಸ್.ಎ.ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅರ್ಚಕರು ಹಾಗೂ ಆಗಮಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಹಶೀಲ್ದಾರ್ ಎಸ್.ಎ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರು ಹಾಗೂ ಆಗಮಿಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇವಾಲಯಗಳು ಜನರಿಗೆ ಸಮಾಧಾನ ನೀಡುವ ತಾಣಗಳಾಗಿವೆ. ಜೀವನದಲ್ಲಿ ನೆಮ್ಮದಿ ಕಾಣಲು ದೇವರ ಸನ್ನಿಧಿಗೆ ಹೋಗುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಭಕ್ತರ ಪರವಾಗಿ ದೇವರ ಸೇವೆ ನಡೆಸಿಕೊಡುವ ಅರ್ಚಕರು ಹಾಗು ಆಗಮಿಕರ ಪಾತ್ರ ಮುಖ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಜಿಲ್ಲಾ ಘಟಕದ ಮುಖಂಡ ಡಾ. ವೈ.ಆರ್.ರಾಮಾನುಜಾಚಾರ್ ಮಾತನಾಡಿ, ಮುಜರಾಯಿ ದೇವಾಲಯಗಳ ಅರ್ಚಕರು ಹಾಗೂ ಆಗಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಾಂಘಿಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಯರ್ರಂವಾರಿಪಲ್ಲಿ ಗ್ರಾಮದ ವೈ.ಎಸ್.ರವೀಂದ್ರಾಚಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ವಿತರಿಸಲಾಯಿತು. ಗೌನಿಪಲ್ಲಿ ಗ್ರಾಮದ ಸಮಾಜ ಸೇವಕ ರಾಮಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಜಿ.ಎ.ಶ್ರೀರಂಗಾಚಾರ್, ಉಪಾಧ್ಯಕ್ಷ ಜಿ.ಶ್ರೀನಿವಾಸಾಚಾರ್, ಖಜಾಂಚಿ ಡಿ.ರಾಜಣ್ಣ, ಕಾರ್ಯದರ್ಶಿ ಜನಾರ್ಧನಾಚಾರ್, ಸಹ ಕಾರ್ಯದರ್ಶಿ ಆರ್.ಕೆ.ಶ್ರೀನಿವಾಸ್, ಸದಸ್ಯರಾದ ರಾಮಾನುಜಾಚಾರ್, ಆರ್.ತುಳಸಿರಾಮ್, ಡಿ.ಎನ್.ವೇಣುಗೋಪಾಲಾಚಾರ್, ಎನ್.ಕೆ.ವೆಂಕಟರಮಣ, ಪಿ.ಪ್ರಸನ್ನಕುಮಾರ್, ಎಚ್.ಎನ್.ರಾಮಮೂರ್ತಿ, ಎಚ್.ಜಿ.ನಾಗರಾeರಾವ್, ಎಂ.ವಿ.ಅಶ್ವತ್ಥನಾರಾಯಣರಾವ್, ಆರ್.ಶ್ರೀನಾಥ್, ನಾಗರಾಜಾಚಾರ್ ಇದ್ದರು.