ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು ಸಂಶೋಧನಾ ನಿರ್ದೇಶಕ ಡಾ. ಡಿ.ಆರ್.ಪಾಟೀಲ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಡಿ.ಆರ್.ಪಾಟೀಲ್ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದ ಸಮೀಪ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಸ್ಥಳೀಯ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆ ವತಿಯಿಂದ ಗೋಡಂಬಿ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು ಎಂಬ ವಿಷಯ ಕುರಿತು ಬುಧವಾರ ಏರ್ಪಡಿಸಿದ್ದ ಒಂದು ದಿನದ ರೈತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಳೆ ಕೊರತೆಯಿಂದಾಗಿ ಮಾವಿನ ಬೆಳೆ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಇಳುವರಿಯು ಗಣನೀಯವಾಗಿ ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ ಕಡಿಮೆ ತೇವಾಂಶದಲ್ಲೂ ಉತ್ತಮ ಇಳುವರಿ ಕೊಡುವ ಗೊಡಂಬಿ ಉತ್ತಮ ಎಂದು ಹೇಳಿದರು.
ಸ್ಥಳೀಯ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಮಾತನಾಡಿ, ಗೋಡಂಬಿ ಗಿಡಗಳನ್ನು ಮೂರು ವರ್ಷ ಚೆನ್ನಾಗಿ ಬೆಳೆಸಿದರೆ ಸಾಕು. 30 ವರ್ಷ ಉತ್ತಮ ಗುಣಮಟ್ಟದ ಫಸಲು ನೀಡುತ್ತವೆ. ಗೊಂಡಂಬಿ ಬೀಜವನ್ನು ದಾಸ್ತಾನು ಮಾಡಬಹುದಾದ ಅನುಕೂಲ ಇರುವುದರಿಂದ, ಬೆಲೆ ಹೆಚ್ಚಾದ ಸಂದರ್ಭದಲ್ಲಿ ಮಾರಾಟ ಮಾಟುವ ಅವಕಾಶ ಇದೆ ಎಂದು ಹೇಳಿದರು.
ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿ.ಕೃಷ್ಣಮೂರ್ತಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಆರ್.ಕೆ.ರಾಮಚಂದ್ರ, ಬಿ.ಎನ್.ರಾಜೇಂದ್ರ, ಡಾ. ಬಿ.ಆಂಜನೇಯರೆಡ್ಡಿ, ಡಾ. ಎನ್.ಅಶ್ವತ್ಥನಾರಾಯಣರೆಡ್ಡಿ, ಡಾ. ಜಿ.ಎಸ್.ಚಿಕ್ಕಣ್ಣ, ಎಂ.ರಮೇಶ್, ಕೆ.ಪೊಟ್ಟಪ್ಪ, ಬಿ.ಸುಬ್ರಮಣ್ಯಂ ಗೋಡಂಬಿ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯವಾದ ತರಬೇತಿ ನೀಡಿದರು.