ವರದಿ : ಕೆ.ಜಿ.ವೈದ್ಯ,ಕುಂದಾಪುರ
ಕುಂದಾಪುರ : ಯಾವುದೇ ಧರ್ಮದ ಶ್ರದ್ಧಾ ಕೇಂದ್ರಗಳಾದರೂ ಅವು ಸಮಾಜದ ಕಣ್ಣುಗಳಂತೆ. ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನ ರಾಜ್ಯದಲ್ಲಿನ ಪ್ರಮುಖ ಶ್ರದ್ಧಾಕೇಂದ್ರಗಳಲ್ಲಿ ಒಂದು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಕೋಟೇಶ್ವರಕ್ಕೂ ಅವಿನಾಭಾವ ಸಂಬಂಧವಿದೆ. ಈ ಕ್ಷೇತ್ರದ ಪುನರುತ್ಥಾನದ ಪವಿತ್ರ ಕಾರ್ಯದಲ್ಲಿ ಧರ್ಮಸ್ಥಳ ಕ್ಷೇತ್ರವೂ ಪಾಲ್ಗೊಳ್ಳುತ್ತಿರುವುದು ಶ್ರದ್ಧಾಳುಗಳಾದ ನಮಗೆಲ್ಲರಿಗೂ ಸಂತಸದ ವಿಷಯ. ಶ್ರೀ ಮಂಜುನಾಥನ ಪ್ರಸಾದರೂಪವಾಗಿ ಖಾವಂದರು ಕೊಡಮಾಡಿದ ದೇಣಿಗೆಯನ್ನು ಶ್ರೀ ಕ್ಷೇತ್ರಕ್ಕೆ ಹಸ್ತಾಂತರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮುರಳೀಧರ ಶೆಟ್ಟಿ ಹೇಳಿದರು.
ಕೋಟೇಶ್ವರದ ಐತಿಹಾಸಿಕ ಶ್ರೀ ಕೋಟಿಲಿಂಗೇಶ್ವರ ದೇವಳದಲ್ಲಿ ನಡೆದ ಸರಳ ಸಮಾರಂಭದಲ್ಲಿ, ದೇವಳ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ಮೂರು ಲಕ್ಷ ರೂ. ದೇಣಿಗೆಯ ಡಿ.ಡಿ. ಹಸ್ತಾಂತರಿಸಿ ಅವರು ಶುಭ ಹಾರೈಸಿದರು.
ದೇಣಿಗೆಯನ್ನು ಸ್ವೀಕರಿಸಿದ ದೇವಳ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ ಕೃತಜ್ಞತೆ ಸಮರ್ಪಿಸಿ, ಇದು ಮುಜರಾಯಿ ಇಲಾಖೆಯ ಸ್ವಾಮ್ಯಕ್ಕೆ ಒಳಪಟ್ಟ ದೇವಸ್ಥಾನವಾದರೂ ಜೀರ್ಣೋದ್ಧಾರದಂತ ದೊಡ್ಡ ಕಾರ್ಯಗಳಲ್ಲಿ ಸಾರ್ವಜನಿಕ ಭಕ್ತಾದಿಗಳು, ದಾನಿಗಳು ಹಾಗೂ ಇತರ ದೊಡ್ಡ ಕ್ಷೇತ್ರಗಳ ಸಹಕಾರ ಅತಿ ಅಗತ್ಯವಿದೆ. ಈ ಪವಿತ್ರ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ ಜೀರ್ಣೋದ್ಧಾರ ಕಾರ್ಯಗಳು ಶೀಘ್ರ ಮುಗಿದು ಬ್ರಹ್ಮಕಲಶ, ರಥೋತ್ಸವಗಳು ನೆರವೇರಲಿವೆ ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಜೀರ್ಣೋದ್ಧಾರ ಕಾಮಗಾರಿಗಳ ವಿವರ ನೀಡಿ ದಾನಿಗಳು ನೆರವು ನೀಡುವಂತೆ ಮನವಿ ಮಾಡಿದರು.
ಯೋಜನಾ ಸೇವಾ ಪ್ರತಿನಿಧಿ ಸುಶೀಲಾ ಶೇಟ್ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರು, ಯೋಜನಾ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಯೋಜನಾ ಮೇಲ್ವಿಚಾರಕ ನಾಗರಾಜ್ ಎಚ್. ವಂದಿಸಿದರು.