JANANUDI.COM NETWORK
ಕುಂದಾಪುರ,ಜ.9: ಇತ್ತೀಚೆಗೆ ಅಗಲಿದ ಹಿರಿಯ ಕಾಂಗ್ರೆಸ್ ನಾಯಕ, ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾದ, ಪ್ರಾಥಮಿಕ ಸಹಕಾರಿ ಕುಂದಾಪುರ ಕ್ರಷಿ ಮತ್ತು ಗ್ರಾಮೀಣಾಭಿವ್ರದ್ದಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಎಸ್. ದಿನಕರ ಶೆಟ್ಟಿಯವರಿಗೆ ಇಂದು ಶನಿವಾರ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನುಡಿನಮನಸಲ್ಲಿಸಲಾಯಿತು.
“ಜನನ ಮತ್ತು ಮರಣದ ನಡುವೆ ವ್ಯಕ್ತಿಯ ಜೀವನದಲ್ಲಿ ಸಾಧನೆಗಳು ಶಾಶ್ವತವಾಗಿ ಉಳಿಯುತ್ತವೆ. ನಿಧನರಾದ ದಿನಕರ್ ಶೆಟ್ಟಿಯವರ ಸರಳತೆ, ಸೌಮ್ಯತೆ, ಪ್ರಾಮಾಣಿಕತೆ ಮತ್ತು ಬದ್ಧತೆ ಕ್ರಷಿ ಪರ ಕಾಳಜಿ ಅವರನ್ನು ಶಾಶ್ವತವಾಗಿಸುತ್ತದೆ” ಮಾಜಿ ಸಚಿವ ವಿನಾಯಕುಮಾರ್ ಸೊರಕೆ ಅವರು ನುಡಿ ನಮನ ಸಲ್ಲಿಸುತ್ತಾ ’ ದಿನಕರ್ ಶೆಟ್ಟಿಯವರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಃಸ್ಥಾಪನೆ,ಅವರ ಕನಸಾಗಿತ್ತು. ಕಬ್ಬು ಬೆಳೆಗಾರರ ಬಗ್ಗೆ ಉತ್ತಮ ಆಲೋಚನೆ,ರೈತ ಪರ ಚಿಂತನೆಗಳಿಂದ ತಾಲ್ಲೂಕಿನಾದ್ಯಂತ್ತ ಅವರು ಅಪಾರ ಜನರ ಗೌರವವನ್ನು ಪಡೆದವರು’ ಎಂದು ಹೇಳಿದರು.
ಮಾಜಿ ಲಯನ್ಸ್ ಗವರ್ನರ್, ಉದ್ಯಮಿ ಜಯಕಾರ ಶೆಟ್ಟಿ ಮಾತನಾಡಿ ’ದಿನಕರ್ ಶೆಟ್ಟಿಯವರ ಕೆಲಸ ಯುವಜನರಿಗೆ ಒಂದು ಮಾದರಿ. ರೈತರ ಮೂಲಕ ಸಾಕಷ್ಟು ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ವಿಯಾಗಿದ್ದರು’ ಎಂದು ಹೇಳಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ ಮಾತನಾಡುತ್ತಾ, ದಿನಕರ್ ಶೆಟ್ಟಿ ಯಾವಾಗಲೂ ಸಹಕಾರಿ ಕ್ಷೇತ್ರದಲ್ಲಿ ಜನರ ಹೃದಯದಲ್ಲಿ ಉಳಿಯುತ್ತಾರೆ. ಅವರು 30 ವರ್ಷಗಳ ಕಾಲ ಪಿಎಲ್ಡಿ ಬ್ಯಾಂಕ್ನ ನಿರ್ದೇಶಕರಾಗಿ, 25 ವರ್ಷಗಳ ಅಧ್ಯಕ್ಷರಾಗಿ ಕಾಲ ಸೇವೆ ಸಲ್ಲಿಸಿದವರಾಗಿದ್ದು ಕಾಂಗ್ರೆಸ್ ಪಕ್ಷದಲ್ಲೂ ಅವರ ಸೇವೆ ಅಪಾರ ಮತ್ತು ವಿಶಿಷ್ಟವಾಗಿತ್ತು’ ಎಂದು ಅವರು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು.
ಕಾಂಗ್ರೆಸ್ ಮುಖಂಡ ಬಿ.ಅವರ್ಷೆ ಸುಧಾಕರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಲ್ಕೆಬೈಲು ಕಿಶನ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಮಲಾ ಭಂಡಾರಿ ನುಡಿನಮನ ಸಲ್ಲಿಸಿದರು. ಕೆಂಚನೂರು ಸೋಮಶೇಖರ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಿ.ಪುತ್ರನ್ ಇನ್ನಿತರರು ಉಪಸ್ಥಿತರಿದ್ದರು.
ವಿಕಾಸ್ ಹೆಗ್ಡೆ ಕಾರ್ಯಕ್ರಮವನ್ನು ನಡೆಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದಾ ಕ್ರಾಸ್ತಾ ಸ್ವಾಗತಿಸಿದರು, ಖಜಾಂಚಿ ನಾರಾಯಣ ಆಚಾರ್ ವಂದಿಸಿದರು.