ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜು ಮೈದಾನದಲ್ಲಿ ಸ್ಥಾಪಿಸಲಾಗಿರುವ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ನೇಮಿಸಲಾಗಿರುವ ಮತಗಟ್ಟೆ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದುಕೊಂಡರು.
ಪಡೆದುಕೊಂಡ ಚುನಾವಣಾ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಕುಳಿತು ಪರಿಶೀಲನೆ ನಡೆಸಿದ ಬಳಿಕ, ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿದ್ದ ಭೋಜನ ಶಾಲೆಯಲ್ಲಿ ಊಟ ಮುಗಿಸಿಕೊಂಡು, ತಮಗಾಗಿ ಮೀಸಲಿಡಲಾಗಿದ್ದ ಬಸ್ಗಳಲ್ಲಿ ನಿಗದಿತ ಗ್ರಾಮಗಳ ಮತಗಟ್ಟೆಗಳಿಗೆ ತೆರಳಿದರು. ತಾಲ್ಲೂಕಿಲ್ಲಿ ಚುನಾವಣೆ ನಡೆಯಲಿರುವ 23 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆ ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಲು1265 ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತಗಟ್ಟೆಗಳ ರಕ್ಷಣೆ ಹಾಗೂ ಸುವ್ಯವಸ್ಥೆ ಪಾಲನೆಗೆ 350 ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಕಂದಾಯ ಹೋಬಳಿವಾರು ಕಂದಾಯ ನಿರೀಕ್ಷಕರು, ಶಿರಸ್ತೇದಾರರು, ರಿಟರ್ನಿಂಗ್ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಚುನಾವಣಾ ವಿಭಾಗದ ಸಿಬ್ಬಂದಿ ಚುನಾವಣಾ ಸಾಮಗ್ರಿ ವಿತರಣಾ ಕಾರ್ಯದಲ್ಲಿ ನೆರವಾದರು. ಮತಗಟ್ಟೆ ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ಊಟದ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಯಿತು.