ಪಟ್ಟಣದ ಹೃದಯ ಭಾಗವಾದ ಎಂಜಿ ರಸ್ತೆಯಲ್ಲಿ ಅವರೆ ಕಾಯಿ ಸಗಟು ವಹಿವಾಟು ನಡೆಸುವುದರಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಹೃದಯ ಭಾಗವಾದ ಎಂಜಿ ರಸ್ತೆಯಲ್ಲಿ ಅವರೆ ಕಾಯಿ ಸಗಟು ವಹಿವಾಟು ನಡೆಸುವುದರಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.
ಕಳೆದ ವರ್ಷ ಪಟ್ಟಣದಲ್ಲಿ ನಡೆಯುತ್ತಿದ್ದ ತರಕಾರಿ ಮಾರುಕಟ್ಟೆ ವಹಿವಾಟನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲಾಯಿತು. ಆದರೆ ಅವರೆ ಕಾಯಿ ಮಂಡಿ ಮಾಲೀಕರು ಪ್ರಭಾವಿ ರಾಜಕಾರಣಿಗಳಿಗೆ ಮೊರೆ ಹೋಗೆ, ಮುಂದಿನ ವರ್ಷದಿಂದ ಎಪಿಎಂಸಿ ಮಾರುಕಟ್ಟೆಗೆ ವಹಿವಾಟು ಸ್ಥಳಾಂತರಿಸುವುದಾಗಿ ತಿಳಿಸಿದ್ದರು. ಆದರೆ ಈಗ ಹೇಳಿದಂತೆ ನಡೆದುಕೊಳ್ಳದೆ ಮತ್ತೆ ಇಲ್ಲೇ ವಹಿವಾಟು ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
‘ಪಟ್ಟಣದಲ್ಲಿ ಯಾವುದೇ ಕಾರಣಕ್ಕೂ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗಲು ಬಿಡುವುದಿಲ್ಲ. ರಸ್ತೆ ಮಧ್ಯೆ ಅವರೆ ಕಾಯಿ ವಹಿವಾಟು ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅವರೆ ಕಾಯಿ ವಹಿವಾಟನ್ನು ಪಟ್ಟಣದಿಂದ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ತಿಳಿಸಿದ್ದಾರೆ.