ನಿವಾರ್ ಚಂಡಮಾರುತದ ಹಾವಳಿಗೆ ತುತ್ತಾಗಿರುವ ಬೆಳೆಗಳಿಗೆ ಎಕರೆಗೆ ೨ ಲಕ್ಷ ಪರಿಹಾರ, ಜೊತೆಗೆ ಉಚಿತವಾಗಿ ಬಿತ್ತನೆ ಆಲೂಗಡ್ಡೆ, ಔಷಧಿಯನ್ನು ಪೂರೈಕೆ ಮಾಡಬೇಕೆಂದು ರೈತ ಸಂಘದಿಂದ ಒತ್ತಾಯ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ನಿವಾರ್ ಚಂಡಮಾರುತದ ಹಾವಳಿಗೆ ತುತ್ತಾಗಿರುವ ಬೆಳೆಗಳಿಗೆ ಪ್ರತಿ ಎಕರೆಗೆ ೨ ಲಕ್ಷ ಪರಿಹಾರ ನೀಡುವ ಜೊತೆಗೆ ಉಚಿತವಾಗಿ ಬಿತ್ತನೆ ಆಲೂಗಡ್ಡೆ, ಔಷಧಿಯನ್ನು ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಅಂಗಮಾರಿ ಟಮೋಟೋ ಮತ್ತು ಕ್ಯಾಪ್ಸಿಕಾಂ ಗಿಡಗಳ ಸಮೇತ ತೋಟಗಾರಿಕೆ ಇಲಾಖೆಯ ಮುಂದೆ ಹೋರಾಟ ಮಾಡಲಾಯಿತು.
ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಒಂದು ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾಯಿದೆಗಳು ಮತ್ತೊಂದು ಕಡೆ ಅತಿವೃಷ್ಠಿ, ಅನಾವೃಷ್ಠಿ ಇವುಗಳ ಮಧ್ಯೆ ಚಂಡಮಾರುತಗಳ ಹಾವಳಿಗಳಿಂದ ರೈತರು ಕಷ್ಟಪಟ್ಟು ಖಾಸಗಿ ಸಾಲ ಮಾಡಿ ಬೆಳೆದಂತಹ ಬೆಳೆಗಳು ಕಣ್ಣಮುಂದೆಯೇ ನಾಶವಾಗುತ್ತಿವೆ. ಇದಕ್ಕೆ ತಕ್ಕಂತೆ ರಾಜ್ಯ ಸರ್ಕಾರದ ಕೃಷಿ ಹಾಗೂ ತೋಟಗಾರಿಕೆ ಸಚಿವರು ಪತ್ರಿಕಾ ಮಾದ್ಯಮಕ್ಕೆ ಹೇಳಿಕೆ ನೀಡಲು ಸೀಮಿತವಾಗಿದ್ದಾರೆ.

ಆಯಾ ಜಿಲ್ಲೆಯ ರೈತರ ಸಮಸ್ಯೆಗಳನ್ನು ಆಲಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ. ಇತ್ತೀಚೆಗೆ ಕೊರೊನಾದಿಂದ ತಪ್ಪಿಸಿಕೊಂಡು ಬೆಳೆದಿದ್ದ ಸಾವಿರಾರು ಹೆಕ್ಟೇರ್ ಟೊಮೆಟೊ, ಆಲೂಗಡ್ಡೆ, ಕ್ಯಾಪ್ಸಿಕಂ ಮತ್ತಿತರ ವಾಣಿಜ್ಯ ಬೆಳೆಗಳು ಇತ್ತೀಚೆಗೆ ೯ ದಿನಗಳ ಕಾಲ ಸುರಿದ ನಿವಾರ್ ಜಡಿ ಮಳೆಗೆ ಅಂಗಮಾರಿ ಮತ್ತಿತರ ರೋಗಗಳು ಬಂದು ಸಂಪೂರ್ಣವಾಗಿ ಬೆಳೆಗಳು ನಾಶವಾಗಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ರೈತರ ತೋಟಗಳ ಕಡೆ ಮುಖ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಒಂದು ಎಕರೆ ಆಲೂಗಡ್ಡೆ ಬೆಳೆ ಮಾಡಲು ೫ ಲಕ್ಷ ಖರ್ಚು ಬರುತ್ತಿದೆ. ೭ ಸಾವಿರದಿಂದ ೮ ಸಾವಿರ ನೀಡಿ ಖರೀದಿ ಮಾಡಿ ಬಿತ್ತನೆ ಮಾಡಿರುವ ಆಲೂಗಡ್ಡೆ ಸಂಪೂರ್ಣವಾಗಿ ಕೊಳೆತುಹೋಗಿದೆ. ಇದರಿಂದ ಹೆಚ್ಚಿನ ಬಂಡವಾಳ ಹೂಡಿರುವ ರೈತರು ದಿಕ್ಕು ತೋಚದೆ ಅಧಿಕಾರಿಗಳ ಆಗಮನಕ್ಕೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಕೂಡಲೇ ಕೋಲಾರ ಜಿಲ್ಲಾದ್ಯಂತ ನಿವಾರ್ ಚಂಡ ಮಾರುತದಿಂದ ನಾಶವಾಗಿರುವ ಬೆಳೆಗಳ ಸಂಪೂರ್ಣ ಮಾಹಿತಿಯನ್ನು ಪಡೆದು ಕೂಡಲೇ ಪ್ರತಿ ಎಕರೆಗೆ ೨ ಲಕ್ಷ ಪರಿಹಾರ ನೀಡುವ ಜೊತೆಗೆ ಬಿತ್ತನೆ ಆಲೂಗಡ್ಡೆ ಮತ್ತು ಔಷಧಿಗಳನ್ನು ಸರ್ಕಾರದಿಂದ ಉಚಿತವಾಗಿ ಪೂರೈಕೆ ಮಾಡುವ ಮುಖಾಂತರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕೆಂದು ಸರ್ಕಾರಕ್ಕೆ ಸಮಸ್ತ ರೈತರ ಪರವಾಗಿ ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕಿ ಗಾಯಿತ್ರಿರವರು ಈಗಾಗಲೇ ಸರ್ಕಾರಕ್ಕೆ ಔಷಧಿಗಳಿಗಾಗಿ ಪ್ರಸ್ತಾವಣೆಯನ್ನು ಕಳಿಸಿದ್ದೇವೆ, ನಿಮ್ಮ ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ರೈತರಪರ ನಿಲ್ಲುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ನಳಿನಿ,ವಿ. ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾ.ಅ ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಂಚಲ, ವಿನೋದ್, ಸುನಿಲ್, ಶಿವು, ಅನಿಲ್, ಚಂದ್ರಪ್ಪ, ಮುಂತಾದವರಿದ್ದರು