ಕೋವಿಡ್ ಸಂದರ್ಭದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಜಿಲ್ಲಾಸ್ಪತ್ರೆಗೆ ಖನಿಜ ಪ್ರತಿಷ್ಠಾನ ನಿಧಿಗೆ ಸಂಗ್ರಹವಾಗಿರುವ ಮೊತ್ತದಲ್ಲಿ ಉನ್ನತ ಮಟ್ಟದಲ್ಲಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗುವುದು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಕೋವಿಡ್ ಸಂದರ್ಭದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಜಿಲ್ಲಾಸ್ಪತ್ರೆಗೆ ಖನಿಜ ಪ್ರತಿಷ್ಠಾನ ನಿಧಿಗೆ ಸಂಗ್ರಹವಾಗಿರುವ ಮೊತ್ತದಲ್ಲಿ ಉನ್ನತ ಮಟ್ಟದಲ್ಲಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಅಬಕಾರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ , ಕೋಲಾರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ಸಂಗ್ರಹವಾಗಿರುವ ಮೊತ್ತವನ್ನು ಗಣಿ ಬಾದಿತ ಗ್ರಾಮಗಳಲ್ಲಿ ವಿನಿಯೋಗಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . 15-20 ವರ್ಷಗಳ ಹಿಂದೆ ನಿರ್ಮಿಸಿರುವ ಕೋಲ್ಡ್ ಸ್ಟೋರೆಜ್‌ನ್ನು ನವೀಕರಿಸಬೇಕು . ಜಿಲ್ಲೆಯಲ್ಲಿ ಅನೇಕ ಜನರು ಕಲ್ಲು ಒಡೆಯುವ ವೃತ್ತಿಯಲ್ಲಿ ತೊಡಗಿಕೊಂಡಿದ್ದು , ಎಲ್ಲರೂ ಬಡವರು ಆಗಿದ್ದಾರೆ . ಅದ್ದರಿಂದ ಅವರಿಗೆ ಕ್ಷೇತ್ರವಾರು ಪರವಾನಗಿ ನೀಡಿದರೆ ಅವರ ಜೀವನೋಪಾಯಕ್ಕೆ ಆಧಾರವಾಗುತ್ತದೆ ಎಂದು ತಿಳಿಸಿದರು . ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್ ಮುನಿಸ್ವಾಮಿ ಅವರು ಮಾತನಾಡಿ , ಜಿಲ್ಲೆಯಲ್ಲಿ ಕಲ್ಲು ಒಡೆಯುವ ಕೆಲಸದಲ್ಲಿ ತೊಡೆದುಕೊಂಡಿರವರ ಬಗ್ಗೆ ಸರ್ವೆ ಮಾಡಬೇಕು . ಪರವಾನಗಿ ನೀಡುವ ಸಂದರ್ಭದಲ್ಲಿ ಮೊದಲ ಆದ್ಯತೆಯನ್ನು ಜಿಲ್ಲೆಯ ಜನರಿಗೆ ನೀಡಬೇಕು . ತಮಿಳುನಾಡು ಮತ್ತು ಆಂಧ್ರದಿಂದ ಬಂದು ಅನಧಿಕೃತ ಗ್ರಾನೈಟ್ ಮಾರಾಟ ಮಾಡುತ್ತಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಭೂ ವಿಜ್ಞಾನಿ ಅಧಿಕಾರಿಗೆ ಸೂಚಿಸಿದರು . ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ಮಾತನಾಡಿ ಸರ್ಕಾರದಿಂದ ಕೋವಿಡ್‌ಗೆ ಫಂಡ್ ಅಂತ ಯಾವುದೇ ವಿಶೇಷ ಅನುದಾನ ಬರುವುದಿಲ್ಲ . ಖನಿಜ ಪ್ರತಿಷ್ಠಾನ ನಿಧಿಗೆ ಸಂಗ್ರಹವಾಗಿರುವ ಮೊತ್ತದಲ್ಲಿ ಕೋವಿಡ್ ನಿರ್ವಹಣೆಗೆ 30 % ಹಣವನ್ನು ಮೀಸಲಿಡಲಾಗಿದೆ . ಜಿಲ್ಲಾಸ್ಪತ್ರೆಗೆ ಕಾಂಪೌಂಡ್ ಅತ್ಯಂತ ಅವಶ್ಯಕವಾಗಿದ್ದು , ಎಂ.ಪಿ. ಮತ್ತು ಎಂ.ಎಲ್.ಎ.ಗಳ ಫಂಡ್‌ನಲ್ಲಿ ಕಾಂಪೌಂಡ್ ನಿರ್ಮಾಣವಾಗಬೇಕು . ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದು , ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ . ಕೋವಿಡ್ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ತಿಳಿಸಿದರು . ಸಭೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸಗೌಡ , ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ನಂಜೇಗೌಡ , ಕೆ.ಜಿ.ಎಫ್ . ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್ , ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು , ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್ , ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ , ಸೇರಿದಂತೆ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು .ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ