ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ – 26ನೇ ವಾರ್ಷಿಕ ಮಹಾಸಭೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರಲ್ಲಿ ಸಂಘಟನೆ ಬಲವಾಗುತ್ತಿದೆ. ವಿಪ್ರ ವರ್ಗದವರ ಅವಶ್ಯಕತೆಯನ್ನು ಸರ್ಕಾರಗಳೂ ಮನಗಂಡು ವಿಪ್ರರಿಗಾಗಿಯೇ ಕಾರ್ಯಕ್ರಮ ರೂಪಿಸುವ ರಾಜಕೀಯ ಬೆಳವಣಿಗೆಗಳಾಗುತ್ತಿವೆ. ಈ ಕಾಲಘಟ್ಟದಲ್ಲಿ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ತು ತಾಲೂಕು ಕೇಂದ್ರದಲ್ಲಿ ಒಂದು ಸುಸಜ್ಜಿತ ವಿಪ್ರಭವನ ನಿರ್ಮಿಸಬೇಕು. ಹಾಗೆಯೇ ಬ್ರಾಹ್ಮಣ ವರ್ಗದಲ್ಲಿ ದುರ್ಬಲರಿಗೆ ಸಹಕರಿಸುವ ಕಾರ್ಯವೂ ನಡೆಯಬೇಕು  ಎಂದು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಕರೆನೀಡಿದರು.

ದೇವಳ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ  26ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಶಿವರಾಮ ಉಡುಪ ಪರಿಷತ್ ಮುಖವಾಣಿ ವಿಪ್ರವಾಣಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಸರ್ಕಾರ ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ ನೀಡಲು ಉಪಕ್ರಮಿಸಿದೆ. ಕೆಲವು ತಾಲೂಕು ತಹಶೀಲ್ದಾರರು ಇದಕ್ಕೂ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸರ್ಕಾರಿ ಆದೇಶದನ್ವಯ ಕಾರ್ಯಾಚರಿಸಲು ಅಸಹಕಾರ ತೋರುವ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾದೀತು ಎಂದು ಎಚ್ಚರಿಸಿದರು. ರಾಜ್ಯದಾದ್ಯಂತ ಈ ಬಾರಿ ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 12 ಮಂದಿಗೆ ನೀಡಲಾಗುತ್ತಿದೆ. ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ, ಶೈಕ್ಷಣಿಕವಾಗಿ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಂಡಳಿಯ ವತಿಯಿಂದ ಭರಿಸಲಾಗುವುದು ಎಂದೂ ಅವರು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಕುಂದಾಪುರ ಸರ್ಕಾರಿ ಕೋವಿಡ್ ಆಸ್ಪತ್ರೆಯ ವೈದ್ಯ ಡಾ. ವಿಜಯಶಂಕರ್ ಉಪಾಧ್ಯಾಯ ಕೊರೊನಾ ರೋಗದ ಬಗ್ಗೆ ಸಮಗ್ರ ಮಾಹಿತಿ ನೀಡಿ, ಈ ರೋಗಕ್ಕೆ ಹೆದರುವ ಅಗತ್ಯವಿಲ್ಲ ಆದರೆ ಎಚ್ಚರಿಕೆವಹಿಸಲೇಬೇಕು ಎಂದು ಎಚ್ಚರಿಸಿದರು. ದೇವಳದ ಆನುವಂಶಿಕ ಜೊತೆ ಮೊಕ್ತೇಸರ ಶ್ರೀನಿವಾಸ ಚಾತ್ರ, ಮಹಿಳಾ ವೇದಿಕೆ ಅಧ್ಯಕ್ಷೆ ಪವಿತ್ರಾ ಅಡಿಗ, ಯುವ ವಿಪ್ರವೇದಿಕೆ ಅಧ್ಯಕ್ಷ ಡಾ. ಸಂಪತ್ ಕುಮಾರ್ ಶುಭ ಹಾರೈಸಿದರು.

ಪರಿಷತ್ ನ ಎಲ್ಲ  ವಲಯಗಳ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕ ವಿಪ್ರರನ್ನು ಪುರಸ್ಕರಿಸಲಾಯಿತು. ಅರ್ಹರಿಗೆ ವೈದ್ಯಕೀಯ, ಶೈಕ್ಷಣಿಕ ಸಹಾಯಧನ ವಿತರಿಸಲಾಯಿತು. ವಿಪ್ರವಾಣಿ ಸಂಚಿಕೆ ಪ್ರಾಯೋಜಕ, ಕಮಲಶಿಲೆ ವಲಯ ಅಧ್ಯಕ್ಷ  ಶ್ರೀಧರ ಅಡಿಗ – ಗಿರಿಜಾ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನಿವೃತ್ತ ಯೋಧ ಕೃಷ್ಣ ರಾವ್ ಗುಡ್ಡೆಯಂಗಡಿ ಮತ್ತು ವಿದ್ಯಾಶ್ರೀ ಕಲ್ಕೂರ ಮಾತನಾಡಿದರು.

ತಾಲೂಕು ಪರಿಷತ್ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯ ಅಧ್ಯಕ್ಷರು, ಜಿಲ್ಲೆ, ರಾಜ್ಯ ಪರಿಷತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಗಲಿದ ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿಂದಿನ ವರ್ಷದ ವಾರ್ಷಿಕ ವರದಿ ಮತ್ತು ಆಯ – ವ್ಯಯ ವರದಿಗಳನ್ನು ಮಂಡಿಸಲಾಯಿತು. 2020 – 22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪರಿಷತ್ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ ಸ್ವಾಗತಿಸಿದರು. ಜತೆಕಾರ್ಯದರ್ಶಿ ವೆಂಕಟರಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಪ್ರವಾಣಿ ಸಂಪಾದಕಿ ಪೂರ್ಣಿಮಾ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.