ಇಂಧನ ಘನತ್ಯಾಜ್ಯ ನಿರ್ವಹಣೆ, ಮಳೆನೀರು ಕೊಯ್ಲು ಇತರೆ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ.ಅ.28: ಮಹಾತ್ಮ ಗಾಂಧೀಜಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಸ್‍ಜಿ ಕೋಟೆ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಳ್ಳಿ ಪುರ ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಸ್ವಸಹಾಯ ಸಂಘದ ಸ್ತ್ರೀಶಕ್ತಿ ಪ್ರತಿನಿಧಿಗಳಿಗೆ, ಸದಸ್ಯರಿಗೆ ನವೀಕರಿಸಬಹುದಾದ ಇಂಧನ ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆನೀರು ಕೊಯ್ಲು ಇತರೆ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರು ಘನತ್ಯಾಜ್ಯ ವಿಲೇವಾರಿ ಚಟುವಟಿಕೆಗಳಿಗೆ ಸಹಕರಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಹೆಣ್ಣುಮಕ್ಕಳ ಒಕ್ಕೂಟಕ್ಕೆ ಸಮುದಾಯ ಭವನ, ಮಹಿಳೆಯರು ತಯಾರಿಸುವ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಬ್ಯಾಗ್, ಟೈಲರಿಂಗ್, ಕೌಶಲ್ಯಗಳಲ್ಲಿ ತೊಡಗಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಎಲ್ಲಾ ಮನೆಗಳಿಗೂ ಕೂಡ ಮಳೆ ನೀರು ಕೊಯ್ಲು ಘಟಕವನ್ನು ನಿರ್ಮಿಸಿಕೊಂಡು ಸೋಲಾರ್ ವಿದ್ಯುತ್ ದೀಪ ಎಲ್ಲರೂ ಬಳಕೆ ಮಾಡಿಕೊಳ್ಳಬೇಕು. ನಮ್ಮ ಮನೆಗಳ ಹತ್ತಿರ ಇರುವ ಕಸವನ್ನು ಪ್ರತಿದಿನ 1 ಕಡೆ ಬಕೆಟ್‍ನಲ್ಲಿ ಹಾಕಿ ಮನೆಯ ಸುತ್ತ ಸ್ವಚ್ಛತೆಯಾಗಿ ಇಟ್ಟುಕೊಳ್ಳಬೇಕು. ಮನೆಯ ಮುಂದೆ ಬಚ್ಚಲುಗುಂಡಿ ಸೋಕ್ ಪಿಟ್ ಮಾಡಿಸಿಕೊಂಡು ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಹರಳಕುಂಟೆ ಶಿಲ್ಪಾ ಪಿ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ಬಗ್ಗೆ ಮಾತನಾಡುತ್ತಾ, ಹಸಿಕಸ ಮತ್ತು ಒಣಕಸ ಇದನ್ನು ಮನೆಯಲ್ಲಿಯೇ ವಿಂಗಡಿಸಿ ಗ್ರಾಮ ಪಂಚಾಯಿತಿ ವತಿಯಿಂದ ಅದನ್ನು ವಿಲೇವಾರಿ ಮಾಡಿದ್ದಲ್ಲಿ ನಮ್ಮ ಹಳ್ಳಿಗಳು ಮನೆಗಳು ಸ್ವಚ್ಛವಾಗಿರುತ್ತವೆ. ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಅದು ಭೂಮಿಯಲ್ಲಿ ನೂರು ವರ್ಷಗಳಾದರೂ ಕರಗುವುದಿಲ್ಲ. ಆದ್ದರಿಂದ ನಮ್ಮ ನೀರು ಹಿಂಗುವುದಿಲ್ಲ ಪ್ಲಾಸ್ಟಿಕ್ ಸುಡುವುದರಿಂದ ಒಲೆ ಮತ್ತು ಬೆಂಕಿಯಲ್ಲಿ ಹಾಕುವುದರಿಂದ ಅದು ವಾಯುಮಾಲಿನ್ಯವಾಗುತ್ತದೆ. ಮನೆಯಿಂದ ನಾವುಗಳು ಅಂಗಡಿಗೆ ಹೋಗುವಾಗ ಬ್ಯಾಗ್ ತೆಗೆದುಕೊಂಡು ಹೋಗುವುದರಿಂದ ಈ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬಹುದು ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಮಿಣಿಜೇನಹಳ್ಳಿ ಆಶಾ ಮಾತನಾಡಿ, ಮಹಿಳೆಯರು ಬದಲಾವಣೆಯಾದರೆ ಸಮಾಜ ಬದಲಾವಣೆಯಾಗುತ್ತದೆ, ಸೋಲಾರ್ ವಿದ್ಯುತ್ ದೀಪ ಪ್ರತಿಯೊಂದು ಮನೆಗೂ ಬೇಕಾಗಿದ್ದು ನಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ಈಗಿರುವ ವಿದ್ಯುತ್ತನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ 20%ಕರೆಂಟ್ ಬಿಲ್ಲನ್ನು ಕಡಿಮೆ ಮಾಡಬಹುದು, ಸೋಲಾರ್‍ನಿಂದ ವಾಹನ ಚಾಲನೆ ಮಾಡಬಹುದಾಗಿದೆ. ಪ್ರತಿ ಮನೆಯಲ್ಲೂ ಚಿಕ್ಕ ಚಿಕ್ಕ ಮಕ್ಕಳಿಗೂ ಓದುವ ಸಮಯದಲ್ಲಿ ಸೋಲಾರ್ ವಿದ್ಯುತ್ ದೀಪ ಅಳವಡಿಸಿಕೊಂಡು ಓದಬಹುದು. ಪ್ರತಿ ಪಂಚಾಯಿತಿ ವತಿಯಿಂದ ಬೀದಿಗಳಲ್ಲಿ ಸೋಲಾರ್ ದೀಪವನ್ನು ಅಳವಡಿಸಿ ವಿದ್ಯುತ್ ಅನ್ನು ಉಳಿಸಬಹುದಾಗಿದೆ. ಸೋಲಾರ್ ಆಗಿ ಮಾರ್ಪಡಿಸಬಹುದು. ಪ್ರಕೃತಿದತ್ತವಾಗಿ ಸೂರ್ಯನ ಕಿರಣದಿಂದ ಸಿಗುವಂತಹ ಸೋಲರ್ ಇಂದು ಎಂದೆಂದಿಗೂ ನಿರಂತರವಾಗಿದೆ ಎಂದರು. ಗಾಳಿಯಿಂದಲೂ ವಿದ್ಯುತನ್ನು ತಯಾರಿಸಬಹುದು. ಅದಕ್ಕೆ ಪಿ.ಪಿ.ಟಿ ಮೂಲಕ ವಿಡಿಯೋ ತೋರಿಸಿ ಎಲ್ಲಾ ಮಹಿಳೆಯರಿಗೂ ಅರ್ಥ ಮಾಡಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಎಂ ನಾಗೇಂದ್ರಕುಮಾರ್ ಶೆಟ್ಟಿಕೊತ್ತನೂರು ಇವರು ಮಾತನಾಡಿ, ಮಳೆ ನೀರು ಕೊಯ್ಲು ಬಿದ್ದಂತಹ ಮಳೆ ನೀರನ್ನು ಶೇಖರಣೆ ಮಾಡಿ ಪುನರ್ ಬಳಕೆ ಮಾಡಿಕೊಂಡು ಅಂತರ್‍ಜಲವನ್ನು ವೃದ್ಧಿಸುವಂತೆ ಇಂಗುಗುಂಡಿಗಳನ್ನು ಮಾಡಿಕೊಳ್ಳುವಂತೆ ವ್ಯವಸಾಯ ಹನಿ ನೀರಾವರಿ ತುಂತುರು ನೀರಾವರಿ ಬಳಕೆ ಮಾಡಿಕೊಂಡು ನೀರಿನ ಮಿತವ್ಯಯ ಕಾಪಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಬೇಕೆಂದರು.
ಸಾಂಸ್ಕøತಿಕ ಕಾರ್ಯಕ್ರಮವನ್ನು ನೀರು ನೈರ್ಮಲ್ಯ ಪ್ಲಾಸ್ಟಿಕ್ ಬಳಕೆ ಸ್ವಚ್ಛತೆ ಆರೋಗ್ಯದ ವಿಷಯಗಳ ಬಗ್ಗೆ ಖ್ಯಾತ ಜಾನಪದ ಕಲಾವಿದರಾದ ಜನ್ನಘಟ್ಟ ಕೃಷ್ಣಮೂರ್ತಿ ಅವರು ಹಾಡುಗಳ ಮೂಲಕ ಎಲ್ಲರನ್ನು ರಂಜಿಸಿದರು.
ವೇದಿಕೆಯಲ್ಲಿ ಕುಂಬಾರಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸುಶೀಲಮ್ಮ, ಹೊನ್ನೇನಹಳ್ಳಿ, ಬೆತ್ತನಿ, ಕಳ್ಳಿಪುರ, ನಡುಪಳ್ಳಿ ಗ್ರಾಮದ ಸ್ವಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು. ತೇಜಸ್ವಿನಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷೆ ಬಿ.ಕೆ ರೇಣುಕಾ ಸ್ವಾಗತಿಸಿ, ಸಂಜೀವಿನಿ ಕೋಲಾರಮ್ಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕಷೆ ಹರಳುಕುಂಟೆ ಸುಜಾತ ನಿರೂಪಿಸಿ, ಕಳ್ಳಿಪುರ ಗ್ರಾಮದ ಅಂಬಿಕಾ ಮತ್ತು ಪಂಕಜಾ ಪ್ರಾರ್ಥಿಸಿ, ವೇದ ಮತ್ತು ಮೀನಾಕ್ಷಿ ವಂದಿಸಿದರು.