ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಕೈಜೋಡಿಸುವಂತೆ ಕೆ.ಹೆಚ್ ಮುನಿಯಪ್ಪ ರವರನ್ನು ಕೋರಿದ ಡಿ.ಕೆ.ಶಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ,ಸೆ.9: ರಾಜ್ಯದಲ್ಲಿ ಶತಾಯಗತಾಯ ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಗುರುವಾರ ಸಂಜೆ ಬೆಂಗಳೂರಿನ ಸಂಜಯ್‍ನಗರದ ಮಾಜಿ ಕೇಂದ್ರ ಸಚಿವ ಹಾಗೂ ಸಿ.ಡ್ಲ್ಯೂ.ಸಿ ಸದಸ್ಯರಾದ ಕೆ.ಹೆಚ್ ಮುನಿಯಪ್ಪ ರವರ ನಿವಾಸಕ್ಕೆ ತೆರಳಿ ಪಕ್ಷ ಸಂಘಟನೆ ಮತ್ತು ರಾಜ್ಯ ರಾಜಕೀಯದ ವಿದ್ಯಮಾನಗಳ ಕುರಿತು ಚರ್ಚಿಸಿದರು.
ಇದೀಗ ನಡೆಯಲಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರದ ವಿಧಾನಸಭಾ ಉಪಚುನಾವಣೆ ಹಾಗೂ ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ಮತ್ತು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಕುರಿತು ವಿಸ್ಕøತ ಚರ್ಚೆ ನಡೆಯಿತು.
ಏಳು ಬಾರಿ ಲೋಕಸಭಾ ಸದಸ್ಯರಾಗಿ ಮತ್ತು 2 ಬಾರಿ ಕೇಂದ್ರ ಸಚಿವರಾಗಿದ್ದ ಜೊತೆಗೆ ಇದೀಗ ಸಿ.ಡ್ಲ್ಯೂ.ಸಿ ಸದಸ್ಯರಾಗಿರುವ ನೀವು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಸಹಕಾರ ಬೇಕಿದೆ ಎಂದು ಶಿವಕುಮಾರ್ ಈ ವೇಳೆ ಕೆ.ಹೆಚ್ ಮುನಿಯಪ್ಪರವರನ್ನು ಕೋರಿದರು.
ಇದೇ ವೇಳೆ ರಾಜ್ಯ ರಾಜಕೀಯ ಮತ್ತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚಿಸಿ ನೀವು ಕೇವಲ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೀಮಿತರಾಗದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಮಾಡಿ ಶತಾಯಗತಾಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಂಪೂರ್ಣ ಸಹಕಾರ ನೀಡಿ ಎಂದು ಡಿ.ಕೆ.ಶಿ ಕೋರಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಎಂಟು ಕೇತ್ರಗಳ ಪೈಕಿ ಆರು ಕಡೆ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ ಏಕೈಕ ಲೋಕಸಭಾ ಸದಸ್ಯರೆಂಬ ಹೆಗ್ಗಳಿಕೆ ನಿಮ್ಮದು. ಈ ಸಾಧನೆಯನ್ನು ರಾಜ್ಯದಲ್ಲಿ ಎಲ್ಲಿ ಆಗಿರುವುದಿಲ್ಲ. ಭವಿಷ್ಯದ ವಿಧಾನಸಭಾ ಚುನಾವಣೆಯಲ್ಲೂ ನಿಮ್ಮ ಜಿಲ್ಲೆಯಲ್ಲಿ ಮುಂದುವರೆಸಬೇಕು ಎಲ್ಲಾ ಎಂಟು ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳಬೇಕು. ಅದೇ ರೀತಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಪಡೆಯುವಲ್ಲಿ ಶ್ರಮಿಸಿ ಸಹಕರಿಸಬೇಕೆಂದು ಮತ್ತು ಈ ದಿಸೆಯಲ್ಲಿ ನಿಮ್ಮ ಸಹಕಾರ ಅತ್ಯಂತ ಪ್ರಮುಖವಾದದ್ದು ಎಂದು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ತಿಳಿಸಿದರು.