ಬೀಜಾಡಿ: ಕೃಷಿ ಮಾಹಿತಿ ಕಾರ್ಯಗಾರ ಉದ್ಘಾಟನೆ

JANANUDI.COM NETWORK

ಬೀಜಾಡಿ: ಈ ಬಾರಿ ಕೊರೊನಾ ರೈತರ ಸಂಕಷ್ಟವನ್ನು ಹೆಚ್ಚಿಸಿದ್ದು, ಕೃಷಿ ಚಟುವಟಿಕೆ ಮಾತ್ರ ಬಹಳ ಉತ್ಸುಕತೆಯಿಂದಲೇ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಯುವ ಜನರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಕೊಂಡಿರುವುದು ಒಳ್ಳೆಯ ಬೆಳವಣೆಗೆ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ಮುಖ್ಯ ವ್ಯವಸ್ಥಾಪಕ ಮನೋಹರ್ ಕಟ್ಗೇರಿ ಹೇಳಿದರು.
ಅವರು ಗುರುವಾರ ಬೀಜಾಡಿ ಮಿತ್ರಸೌಧದಲ್ಲಿ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್, ಬೀಜಾಡಿ-ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ ಇವರ ಆಶ್ರಯದಲ್ಲಿ ನಡೆದ ಕೃಷಿ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕೋಟೇಶ್ವರ ವ್ಯವಸಾಯಕ ಸೇವಾ ಸಹಕಾರಿ ಸಂಘದ ನಿರ್ದೇಶಕ, ಪ್ರಗತಿಪರ ಕೃಷಿಕ ಚಂದ್ರಶೇಖರ ಶೆಟ್ಟಿ ಕಾಳಾವರ ಕಾರ್ಯಗಾರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ ವಹಿಸಿದ್ದರು.
ಕೋಟ ರೈತಧ್ವನಿ ಸಂಘಟನೆಯ ಅಧ್ಯಕ್ಷ ಜಯರಾಮ ಶೆಟ್ಟಿ ಭತ್ತ ಕಟಾವಿಗೂ ಮುನ್ನ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು. ಕುಂಭಾಶಿಯ ತಾರಸಿ ಕೃಷಿ ಪರಿಣಿತೆ ಪ್ರೇಮ ಗಣೇಶ ಪೂಜಾರಿ ವೈಜ್ಞಾನಿಕ ತಾರಸಿ ಕೈತೋಟ ರಚನೆಯ ಬಗ್ಗೆ ಮಾಹಿತಿ ನೀಡಿದರು.
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ಯೋಜನಾ ವ್ಯವಸ್ಥಾಪಕ ಅರುಣ್ ಪಟವರ್ಧನ್ ಸಮರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್, ಕಾರ್ಯದರ್ಶಿ ಚಂದ್ರ ಬಿ.ಎನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ಸೆಲ್ಕೋ ಫೌಂಡೇಶನ್ ವತಿಯಿಂದ ತರಕಾರಿ ಬೀಜವನ್ನು ವಿತರಿಸಲಾಯಿತು.
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಬೀಜಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ಗಿರೀಶ್ ಕೆ.ಎಸ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.