ಹಸುಗೂಸು ಸಾವಿಗೆ ಕಾರಣರಾದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯತನ ವಿರುದ್ಧ ಕ್ರಮಕ್ಕೆ ಒತ್ತಾಯ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಸೆ.16: ಹಸುಗೂಸು ಸಾವಿಗೆ ಕಾರಣರಾದ ಶ್ರೀನಿವಾಸಪುರ ನಗರ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳ ಹಾಗೂ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯತನವನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಅಪರಾಧ ತಡೆ ಹಾಗೂ ಮಾನವ ಹಕ್ಕುಗಳ ಭಾರತ ಪರಿಷತ್ ಮತ್ತು ಮಗುವಿನ ಪೋಷಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಶ್ರೀನಿವಾಸಪುರ ಟೌನ್‍ನ ಜಾಕೀರ್ ಹುಸೇನ್ ಮೊಹಲ್ಲಾದ ನಿವಾಸಿಗಳಾದ ಶೇಕ್ ಹೈದರ್ ಅವರ ಮಗಳಾದ ಪೀರ್‍ತಾಜ್ ರವರು 11-9-2020 ರಂದು ಬೆಳಗ್ಗೆ 7-30 ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾಳೆ. ಅಂದು ಮಗು ಮತ್ತು ತಾಯಿ ಆರೋಗ್ಯವಾಗಿರುತ್ತಾರೆ. ನಂತರ 14-9-2020 ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯ ವೈದ್ಯಾಧಿಕಾರಿಗಳು ಗೈರು ಹಾಜರಾಗಿರುತ್ತಾರೆ. ಸಿಬ್ಬಂದಿಯು ಸರಿಯಾಗಿ ಸ್ಪಂದಿಸದೆ ಚಿಕಿತ್ಸೆ ನೀಡದೆ ಬೇಜವಾಬ್ದಾರಿತನದಿಂದ ವರ್ತಿಸಿ ಹಸುಗೂಸಿನ ಸಾವಿಗೆ ಕಾರಣರಾಗಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ರಾಷ್ಟ್ರೀಯ ಅಪರಾಧ ತಡೆ ಹಾಗೂ ಮಾನವ ಹಕ್ಕುಗಳ ಭಾರತ ಪರಿಷತ್‍ನ ತಂಡ ಸಂಬಂಧಪಟ್ಟ ವೈದ್ಯರನ್ನು ವಿಚಾರಿಸಲಾಗಿ ಆಗಿರುವ ಅನಾಹುತಕ್ಕೆ ಬೇಜವಾಬ್ದಾರಿಯೇ ಕಾರಣ ಎಂದು ತಿಳಿಸಿದ್ದು, ಕೂಡಲೇ ಇದಕ್ಕೆ ಕಾರಣರಾದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜಾನ್ ಸಮ್ಯುವೇಲ್ ಕಿಂಜೆ, ರಾಷ್ಟ್ರೀಯ ಕಾರ್ಯದರ್ಶಿ ಬಂತು ಭಾಪೂಜಿ, ರಾಷ್ಟ್ರೀಯ ಖಜಾಂಚಿ ಪಾಲ್ ಪೀಟರ್ ಸನಕ್, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಎಂ, ಉನಿಕಿನಿ ಪೂಜಪ್ಪ, ಶ್ರೀನಿವಾಸಪುರ ಸಾದಿಕ್‍ಪಾಷ, ಹರ್ಷದ್‍ಪಾಷ, ಮೆಗಬೂಬ್ ಪಾಷ ಇನ್ನಿತರರು ಉಪಸ್ಥಿತರಿದ್ದರು.