ಕೋಲಾರ: ಸರ್ಕಾರ ಘೋಷಣೆ ಮಾಡಿದ್ದ ಬೆಳೆ ಪರಿಹಾರ ಕೂಡಲೇ ಬಿಡುಗಡೆ ಮಾಡುವ ಜೊತೆಗೆ ಊಜಿ ನೊಣಕ್ಕೆ ಔಷದಿ ಉಚಿತವಾಗಿ ನೀಡಿ:ಸಚಿವ ನಾರಾಯಣಗೌಡರಿಗೆ ಒತ್ತಾಯ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ಸರ್ಕಾರ ಘೋಷಣೆ ಮಾಡಿದ್ದ ಬೆಳೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವ ಜೊತೆಗೆ ಟೊಮೆಟೊ, ಆಲೂಗಡ್ಡೆ ಬೆಳೆಗೆ ಬರುವ ಅಂಗಮಾರಿ ಊಜಿ ನೊಣಕ್ಕೆ ಅವಶ್ಯಕತೆಯಿರುವ ಔಷದಿಯನ್ನು ಸರ್ಕಾರದಿಂದ ಉಚಿತವಾಗಿ ನೀಡಬೇಕು ಎಂದು ತೋಟಗಾರಿಗೆ ಸಚಿವರಾದ ನಾರಾಯಣಗೌಡರನ್ನು ರೈತಸಂಘದಿಂದ ಒತ್ತಾಯಿಸಿ ಬೆಳೆ ಸಮೇತ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಬೆಳೆನಷ್ಟ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿ 6 ತಿಂಗಳು ಕಳೆದರೂ ಇದುವರೆಗೂ ನೊಂದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಸಿಬ್ಬಂದಿ, ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇದರಿಂದ ನೊಂದ ರೈತರು ನೀಲಗಿರಿ, ಪಾರ್ಥೇನಿಯಂ ಸಸ್ಯ ಹಾಗೂ ಸರ್ಕಾರಿ ಕೆರೆ ಕುಂಟೆಗಳ ದಾಖಲೆಗಳನ್ನು ನೀಡಿರುವ ರೈತರಿಗೆ ಸರ್ಕಾರದ ಪರಿಹಾರ ಹಣ ಬಂದಿದೆ.
ಕಷ್ಟಪಟ್ಟು ಬೆಳೆದಿರುವ ರೈತರಿಗೆ ಬೆಳೆ ಪರಿಹಾರ ಸಿಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನೀವು ಸಮರ್ಪಕವಾಗಿ ಬೆಳೆಯನ್ನು ನಮೂದನೆ ಮಾಡಿಲ್ಲವೆಂಬ ಹಾರಿಕೆ ಉತ್ತರ ನೀಡುತ್ತಾರೆಂದು ಅಸಮಧಾನ ವ್ಯಕ್ತಪಡಿಸಿದರು.
1 ಎಕರೆ ಟೊಮೆಟೊ, ಹೂ ಬೆಳೆಯಬೇಕಾದರೆ ಒಂದೂವರೆ ಲಕ್ಷ ಖರ್ಚು ಬರುತ್ತದೆ. ಆದರೆ ಸರ್ಕಾರ ಬಕಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತೆ ಪ್ರತಿ ಎಕ್ಟೇರ್‍ಗೆ 18 ರಿಂದ 25 ಸಾವಿರ ನೀಡುತ್ತಿರುವುದು ಔಷಧಿಗಳಿಗೂ ಸಹ ಸಾಕಾಗುತ್ತಿಲ್ಲ. ಸರ್ಕಾರ ಬೆಳೆಯ ಅಂಕಿ ಅಂಶಗಳ ಪ್ರಕಾರ ಪ್ರತಿ ಎಕರೆಗೆ ಕನಿಷ್ಟ ಪಕ್ಷ 2 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕೈಗೆ ಬಂದಿರುವ ಟೊಮೆಟೊ, ಕ್ಯಾಪ್ಸಿಕಂ, ಹೂ ಹಾಗೂ ಆಲೂಗಡ್ಡೆ ಬೆಳೆಗಳು ಸಂಪೂರ್ಣವಾಗಿ ಅಂಗಮಾಡಿ ಹಾಗೂ ಊಜಿ ನೊಣಕ್ಕೆ ಬಲಿಯಾಗುತ್ತಿವೆ. ಇಲಾಖೆಯಿಂದ ಈ ರೋಗಕ್ಕೆ ಔಷಧಿ ಕೇಳಿದರೆ ಸರ್ಕಾರದಿಂದ ಬೇಡಿಕೆಯಿರುವಷ್ಟು ಸರಬರಾಜಾಗುತ್ತಿಲ್ಲ. ಬಂದಾಗ ಕೊಡುತ್ತೇವೆಂದು ಬೇಜವಾಬ್ದಾರಿಯಾಗಿ ಉತ್ತರ ನೀಡುವ ಜೊತೆಗೆ ಬೇಡಿಕೆಗೆ ತಕ್ಕಂತೆ ಸರ್ಕಾರಕ್ಕೆ ಮನವಿ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.
ಇದರಿಂದ ರೈತರು ಖಾಸಗಿ ಔಷಧಿ ಅಂಗಡಿಗಳನ್ನು ಅವಲಂಭಿಸಿ ಬೆಳೆ ನಷ್ಟವಾದಾಗ ಖಾಸಗಿ ಸಾಲಕ್ಕೆ ಸಿಲುಕುವಂತಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ಅವಶ್ಯಕತೆಯಿರುವ ಔಷಧಿಯನ್ನು ಉಚಿತವಾಗಿ ನೀಡಬೇಕೆಂದು ಆಗ್ರಹಿಸಿದರು.
ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿರುವ ರೇಷ್ಮೆ ಉದ್ಯಮಕ್ಕೆ ಬಲ ತುಂಬಲು ಡಾ.ಬಸವರಾಜನ್ ವರದಿ ಜಾರಿ ಮಾಡುವ ಜೊತೆಗೆ ಕೆಎಸ್‍ಎಂಬಿ ಸಮಸ್ಯೆಯನ್ನು ಪುನಶ್ಚೇತನಗೊಳಿಸಿ ಪ್ರತಿ ಕೆಜಿ ಗೂಡಿನ ಬೆಲೆ 400ರೂ ನಿಗಧಿ ಮಾಡುವ ಜೊತೆಗೆ ಪ್ರತಿ ಕೆಜಿಗೆ 100ರೂ ಪ್ರೋತ್ಸಾಹಧನ ನೀಡಲು ಸರ್ಕಾರ ಮುಂದಾಗಬೇಕು. ಹಾಗೂ ತೋಟಗಾರಿಕೆ ಇಲಾಖೆಯಲ್ಲಿನ ಪಾಲಿಹೌಸ್ ನೆಟ್‍ಹೌಸ್ ಹಾಗೂ ಪ್ಯಾಕ್‍ಹೌಸ್‍ಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ, ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರನ್ನು ರಕ್ಷಣೆ ಮಾಡಲು ಕೃಷಿ ಆಧಾರಿತ ಕೈಗಾರಿಕೆಗಳು ಹಾಗೂ ಮಾವು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಮುಂದಾಗಬೇಕೆಂದು ಸಚಿವರನ್ನು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರಾದ ನಾರಾಯಣಗೌಡರವರು, ಬೆಳೆ ಪರಿಹಾರವನ್ನು ಮುಖ್ಯಮಂತ್ರಿಯ ಜೊತೆ ಮಾತನಾಡಿ ಬಿಡುಗಡೆ ಮಾಡುವ ಜೊತೆಗೆ ಅಂಗಮಾರಿ ರೋಗಕ್ಕೆ ಅವಶ್ಯಕತೆಯಿರುವ ಔಷಧಿಗಳನ್ನು ಪೂರೈಸಿ ಇಲಾಖೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ವೇಣು, ನವೀನ್, ವಕ್ಕಲೇರಿ ಹನುಮಯ್ಯ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ನಳಿನಿ,ವಿ ಮುಂತಾದವರಿದ್ದರು.