ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕಲಾವಿದರು ಪ್ರೋತ್ಸಾಹದ ಕೊರತೆಯಿಂದಾಗಿ ಹಿಂದುಳಿದಿದ್ದಾರೆ. ಅವಕಾಶ ವಂಚಿತರಾಗಿ ಕೈ ಕೊಟ್ಟಿ ಕುಳಿತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಚಲನ ಚಿತ್ರ ನಿರ್ದೇಶಕ ನಿಶಾಂತ್ ಹೇಳಿದರು.
ತಾಲ್ಲೂಕಿನ ವೈ.ಹೊಸಕೋಟೆ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಚಲನ ಚಿತ್ರವೊಂದರ ಹಾಡಿನ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಕೇರ್ ಆಫ್ ಫಿಲಿಂಸ್ ಸಂಸ್ಥೆ ಗ್ರಾಮೀಣ ಪ್ರದೇಶದ ಪ್ರತಿಭಾವಂತರನ್ನು ಗುರುತಿಸಿ ಅವಕಾಶ ಕಲ್ಪಿಸಲು ಮುಂದಾಗಿದೆ. ಸೂಕ್ತ ತರಬೇತಿ ನೀಡಿದ ಬಳಿಕ ಅವಕಾಶ ನೀಡಲಾಗುವುದು ಎಂದು ಹೇಳಿದರು. ಸಧ್ಯದ ಪರಿಸ್ಥಿತಿಯಲ್ಲಿ ಯು ಟೂಬ್ ಹೆಚ್ಚು ಜನಪ್ರಿಯವಾಗುತ್ತಿದೆ. ಯುವ ಜನರು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ತಾವೇ ಒಂದು ವೇದಿಕೆ ಕಲ್ಪಿಸಿಕೊಳ್ಳುತ್ತಿದ್ದಾರೆ. ಈ ಪ್ರಕ್ರಿಯೆ ಸಮಾಜ ಮುಖಿಯಾಗಿರವೇಕು. ಸಮಾಜದ ಆರೋಗ್ಯ ಕೆಡಲು ಅವಕಾಶ ನೀಡಬಾರದು. ಒಂದು ಭಾಷೆಯ ಚಿತ್ರಗೀತೆಯನ್ನು ಇನ್ನೊಂದು ಭಾಷೆಯಲ್ಲಿ ಸ್ಥಳೀಯ ಕಲಾವಿದರಿಂದ ಚಿತ್ರೀಕರಿಸುವ ಕಾರ್ಯವೂ ನಡೆಯುತ್ತಿದೆ ಎಂದು ಹೇಳಿದರು. ಕೇರ್ ಆಫ್ ಫಿಲಿಂಸ್ ಸಂಸ್ಥೆ ಈಗಾಗಲೆ ಕನ್ನಡದ ಕವಿ, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ. ಸಾಮಾನಿಕ ಪರಿವರ್ತನೆಗೆ ಪೂರಕವಾದ ಕಿರು ಚಿತ್ರಗಳನ್ನೂ ತಯಾರಿಸಿದೆ. ಯುವ ಜನರ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಸಿದೆ ಎಂದು ಹೇಳಿದರು. ಕಲಾವಿದರಾದ ಪ್ರಶಾಂತ್, ಸಿಂಧು, ಛಾಯಾಗ್ರಾಹಕ ಆರ್ಯ ಇದ್ದರು. ಹಳ್ಳಿಯಲ್ಲಿ ನಡೆದ ಅಪರೂಪದ ಚಿತ್ರೀಕರಣ ನೋಡಲು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಕಿಕ್ಕಿರಿದು ತುಂಬಿದ್ದರು.