ಗೋಕುಲ ಮಿತ್ರಬಳಗದಿಂದ ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ಬಡವರ ನೆರವಿಗೆ ಉಳ್ಳವರು ಮುಂದಾಗಲಿ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ:- ಕೊರೋನಾ ಸಂಕಷ್ಟದಲ್ಲಿ ನಲುಗಿರುವ ಬಡವರ ನೆರವಿಗೆ ಬರಲು ಉಳ್ಳವರ ಮನಃಪರಿವರ್ತನೆಯಾಗಬೇಕು ಸಹಾಯ ಮಾಡುವ ಹೃದಯವಂತಿಕೆ ಬರಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ಸೋಮವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಗೋಕುಲ ಮಿತ್ರಬಳಗದಿಂದ ಚಲನಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ಬಡವರು ಸ್ವಾಭಿಮಾನಿಗಳು, ಅವರೆಂದು ಸಹಾಯಕ್ಕಾಗಿ ಕೈಚಾಚೋದಿಲ್ಲ ದುಡಿದು ತಿನ್ನುವ ಅವರ ಆಶಯಕ್ಕೆ ಧಕ್ಕೆ ಬಂದಿದೆ, ಕೆಲಸವಿಲ್ಲದೇ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶ್ರೀಮಂತರು ಕನಿಷ್ಟ ತಮ್ಮ ಸುತ್ತಮುತ್ತಲಿನ ಕೆಲವು ಮಂದಿಗಾದರೂ ನೆರವಾಗಬೇಕು ಎಂದು ಕೋರಿದರು.
ಜನ ಭಯದಲ್ಲಿ ಬದುಕು ಸಾಗಿಸುವಂತಾಗಿದೆ, ಬೀದಿಗೆ ಬಂದರೆ ಎಲ್ಲಿ ಸೋಂಕು ತಗಲುತ್ತದೋ ಎಂಬ ಆತಂಕವೂ ಇದೆ, ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸವಾಗಲಿ ಎಂದ ಅವರು, ಗೋಕುಲ ಮಿತ್ರಬಳಗ ಕೆ.ಎಸ್.ಗಣೇಶ್, ಗೋಪಾಲ್,ಮುನಿವೆಂಕಟ,ಚಲಪತಿ ಮತ್ತಿತರರ ನೇತೃತ್ವದಲ್ಲಿ ಇಂತಹ ಸಾಮಾಜಿಕ ಕಾಳಜಿಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ಕೋವಿಡ್ ಮಹಾಮಾರಿಯಿಂದ ರೈತರ ಬೆಳೆಗಳಿಗೂ ಬೆಲೆಯಿಲ್ಲ, ಅಸಂಘಟಿತ ಕಾರ್ಮಿಕರ ಬದುಕು ಅತಂತ್ರವಾಗಿದೆ, ಹೈನುಗಾರಿಕೆ ಮಾತ್ರ ಸ್ವಲ್ಪಮಟ್ಟಿನ ಬದುಕು ನೀಡಿದೆ ಎಂದ ಅವರು, ಹೈನೋತ್ಪನ್ನಗಳ ಮಾರುಕಟ್ಟೆಗೂ ಸಂಕಷ್ಟವಿದೆ ಎಂದು ತಿಳಿಸಿ, ಗೋಕುಲ ಮಿತ್ರಬಳಗದ ಸಾಮಾಜಿಕ ಕಾರ್ಯಗಳಿಗೆ ನೆರವಾಗುವ ಭರವಸೆ ನೀಡಿದರು.
ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಬಳಗದ ಗೋಪಾಲ್ ಹುಟ್ಟುಹಬ್ಬವನ್ನು ನೆಪವಾಗಿಟ್ಟುಕೊಂಡು ಉತ್ತಮ ಕೆಲಸ ಮಾಡಿದ್ದಾರೆ, ಚಿತ್ರಮಂದಿರ ಕಾರ್ಮಿಕರ ಸಂಕಷ್ಟದ ಬಗ್ಗೆ ಯಾರಿಗೂ ಅರಿವೇ ಇರಲಿಲ್ಲ, ಅದನ್ನು ಗಮನಕ್ಕೆ ತಂದುಕೊಂಡು ನೆರವಾಗಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಮಿಕ ಇಲಾಖೆ
ನೆರವಿನ ಅರಿವು
ಕರ್ನಾಟಕ ಅಸಂಘಟಿತ ಪರಿಷತ್ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‍ಕುಮಾರ್, ಸಿನಿಮಾಫೋಟೋಗ್ರಫಿ ಅಸೋಸಿಯೇಷನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದೆ, ಚಿತ್ರಮಂದಿರ ಕಾರ್ಮಿಕರು ಜಿಲ್ಲಾ ಸಂಘ ರಚಿಸಿಕೊಳ್ಳಿ, ನಾನೇ ಒಂದು ವರ್ಷದ ಸದಸ್ಯತ್ವ ಶುಲ್ಕ ಕಟ್ಟಿ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಕೊಡಿಸುವೆ ಎಂದು ಭರವಸೆ ನೀಡಿ, ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.
ಮಿತ್ರಬಳಗದ ಕೆ.ಎಸ್.ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗ ಇತ್ತೀಚೆಗೆ ಬಡ ಹೆಣ್ಣು ಮಗಳ ಮದುವೆ ಮಾಡಿದ್ದು, ಅದಕ್ಕೆ ಸದಸ್ಯರ ಜತೆಗೆ ಶೇ.50 ರಷ್ಟು ನೆರವನ್ನು ಬ್ಯಾಲಹಳ್ಳಿ ಗೋವಿಂದಗೌಡರು ನೀಡಿದ್ದಾರೆ, ಇದಾದ ನಂತರವೂ ಕೆಲವು ಸದಸ್ಯರು ನೀಡಿದ ನೆರವನ್ನು ಕ್ರೋಢೀಕರಿಸಿ 4 ತಿಂಗಳಿಂದ ಸಂಬಳ,ಕೆಲಸವಿಲ್ಲದೆ ಪರದಾಡುತ್ತಿದ್ದ ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ನೀಡಲು ನಿರ್ಧರಿಸಲಾಯಿತು ಎಂದರು.
ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಬಳಗದ ಆರ್.ಗೋಪಾಲ್, ಚಲಪತಿ, ರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡ ಆರ್.ಗೋಪಾಲ್‍ರನ್ನು ಸನ್ಮಾನಿಸಿ, ಮಿತ್ರಬಳಗದ ಕಾರ್ಯವನ್ನು ಶ್ಲಾಘಿಸಿ, ತಾವು ನೆರವಾಗುವ ಭರವಸೆ ನೀಡಿದರು.