ಡಿಸಿಸಿ ಬ್ಯಾಂಕ್ ವಿರುದ್ದ ಚಪಲಕ್ಕೆ ಟೀಕೆ ಬೇಡ-ತಮ್ಮಲ್ಲಿ ದಾಖಲೆಗಳಿದ್ದರೆ ಹಿರಿಯ ಶಾಸಕರ ಮುಂದೆ ಮಂಡಿಸಲಿ-ಎಂ.ಎಲ್.ಅನಿಲ್‍ಕುಮಾರ್ ಆಹ್ವಾನ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ:- ಡಿಸಿಸಿ ಬ್ಯಾಂಕ್ ವಿರುದ್ದ ಟೀಕೆ ಮಾಡುವವರು ಯಾರೇ ಆಗಲಿ, ದಾಖಲೆಗಳಿದ್ದರೆ ಜಿಲ್ಲೆಯ ಮುತ್ಸದ್ದಿ ನಾಯಕರಾದ ಶಾಸಕ ರಮೇಶ್‍ಕುಮಾರ್ ಹಾಗೂ ಶ್ರೀನಿವಾಸಗೌಡರ ಮುಂದೆ ಮಂಡಿಸಲಿ,ತಪ್ಪಾಗಿದ್ದರೆ ಇಡೀ ಆಡಳಿತ ಮಂಡಳಿ ತಲೆ ಬಾಗುತ್ತೇವೆ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್ ಟೀಕಾಕಾರರಿಗೆ ಆಹ್ವಾನ ನೀಡಿದರು.
ಸೋಮವಾರ ತಾಲ್ಲೂಕಿನ ಬೆಳ್ಳೂರಿನಲ್ಲಿ ನರಸಾಪುರ ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ 91 ಮಹಿಳಾ ಸಂಘಗಳಿಗೆ 4.18 ಕೋಟಿ ರೂ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕ್‍ನ ಹಿಂದಿನ ದಿವಾಳಿ ಇತಿಹಾಸ ಅರಿಯದ ಕೆಲವರು ಎಲ್ಲೆಂದರಲ್ಲಿ ಬ್ಯಾಂಕ್ ವಿರುದ್ದ ಮಾತನಾಡುತ್ತಿದ್ದಾರೆ, ತಾಯಂದಿರಿಗೆ ಸಾಲ ನೀಡುವಾಗ ಎಲ್ಲಾದರೂ ಪಕ್ಷ,ಜಾತಿ ಆಧಾರಿತವಾಗಿ ಸಾಲ ನೀಡಿದ್ದರೆ ಜಿಲ್ಲೆಯ ಹಿರಿಯ ನಾಯಕರ ಸಮ್ಮುಖದಲ್ಲೇ ದಾಖಲೆ ಸಾಬೀತುಪಡಿಸಲಿ ಎಂದರು.
ಬ್ಯಾಂಕ್ ದಿವಾಳಿಯಾಗಿ ಜಿಲ್ಲೆಯ ಒಬ್ಬರೈತ,ಮಹಿಳೆಗೂ ನೆರವು ನೀಡುವ ಶಕ್ತಿ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ಅಧ್ಯಕ್ಷರಾಗಿದ್ದು, ಇಂದು ಬ್ಯಾಂಕ್ 1200 ಕೋಟಿ ಸಾಲ ನೀಡುವ ಶಕ್ತಿ ಪಡೆದುಕೊಂಡಿದೆ ಇದನ್ನು ಯಾರಿಂದಲಾದರೂ ಕೇಳಿಯಾದರೂ ತಿಳಿದುಕೊಂಡು ಮಾತನಾಡಲಿ ಎಂದರು.
ಸೊಸೈಟಿಗಳಿಗೂ
ಜೀವ ತುಂಬಿದ್ದೇವೆ
ಕೇವಲ ಪಡಿತರ,ಗೊಬ್ಬರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಗಳಿಗೆ ಜೀವ ತುಂಬಿದ್ದೇವೆ, ಪ್ರಾಮಾಣಿಕತೆಗೆ ಹೆಸರಾದ ದಿವಂಗತ ಬೈರೇಗೌಡರು ಹುಟ್ಟಿದ ಹೋಬಳಿಯ ಸೊಸೈಟಿ ಮೂಲಕ 32 ಕೋಟಿ ರೂ ಸಾಲ ನೀಡಿದ್ದೇವೆ, ಸಾಲ ನೀಡುವಾಗ ಯಾರನ್ನು ಜಾತಿ,ಪಕ್ಷ ಯಾವುದೆಂದು ಕೇಳಿಲ್ಲ ಎಂದರು.
ಮಹಿಳೆಯರ ನಂಬಿಕೆ
ಡಿಸಿಸಿಬ್ಯಾಂಕ್ ಜೀವಾಳ
ಶಾಸಕ ಕೆ.ಶ್ರೀನಿವಾಸಗೌಡ ಸಾಲ ವಿತರಿಸಿ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾವಿರಾರು ಕೋಟಿ ರೂ ಸಾಲ ನೀಡಿರುವ ಡಿಸಿಸಿ ಬ್ಯಾಂಕಿಗೆ ತಾಯಂದಿರ ಪ್ರಾಮಾಣಿಕತೆ,ನಂಬಿಕೆ,ಆಶೀರ್ವಾದವೇ ಜೀವಾಳವಾಗಿದೆ ಎಂದು ತಿಳಿಸಿದರು.
ನರಸಾಪುರ ಭಾಗದಲ್ಲಿ ಎಸ್‍ಎಂ.ಕೃಷ್ಣ ಸಿಎಂ ಆಗಿದ್ದಾಗ ಇದ್ದ ಅಧಿಕಾರಿ ಶಂಕರಲಿಂಗೇಗೌಡರ ಸಹಕಾರದಿಂದ ನರಸಾಪುರ ಕೈಗಾರಿಕಾ ವಲಯವಾಗಿದೆ, ಕೆಸಿ ವ್ಯಾಲಿ ನೀರು ಹರಿಯುತ್ತಿದ್ದು, ಕೊಳವೆಬಾವಿಗಳು ರೀಚಾರ್ಜ್ ಆಗಿರುವುದರಿಂದ ರೈತರ ಬದುಕು ಹಸನಾಗುತ್ತಿದೆ ಎಂದರು.
ಪಕ್ಷ,ಜಾತಿ ಕೇಳದೇ
ಸಾಲ ವಿತರಣೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಾವು ಜಾತಿ,ಪಕ್ಷ ನೋಡದೇ ಸಾಲ ವಿತರಿಸಿದ್ದೇವೆ, ಯಾರಿಗಾದರೂ ನೀವು ಯಾವ ಜಾತಿ,ಪಕ್ಷ ಎಂದು ಕೇಳಿದ್ದೇವೆಯೇ ಎಂದು ಪ್ರಶ್ನಿಸಿದಾಗ ಎಲ್ಲಾ ಮಹಿಳೆಯರು ಇಲ್ಲ ಎಂದು ಒಕ್ಕೊರಲಿನಿಂದ ಕೂಗಿದರು.
ಮಹಿಳೆಯರಿಂದಲೇ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ, ನಿಮ್ಮ ಉಳಿತಾಯದ ಹಣ ಡಿಸಿಸಿ ಬ್ಯಾಂಕಿನಲ್ಲಿಟ್ಟು, ಪ್ರಾಮಾಣಿಕತೆ ತೋರಿದರೆ ತಾಯಂದಿರಿಗೆ 1 ಲಕ್ಷ ರೂ ಬಡ್ಡಿರಹಿತ ಸಾಲ ವಿತರಿಸುವ ನನ್ನ ಆಶಯ ಈಡೇರಿಸಲು ಬದ್ದನಾಗಿರುವುದಾಗಿ ತಿಳಿಸಿದರು.
ನಿರ್ದೇಶಕ ನಾಗನಾಳ ಸೋಮಣ್ಣ, ಸಹಕಾರ ರಂಗದಿಂದ ಮಾತ್ರವೇ ಬಡವರಿಗೆ ನೆರವು ಒದಗಿಸಲು ಸಾಧ್ಯ, ನರಸಾಪುರ ಸೊಸೈಟಿ ಒಂದರಿಂದಲೇ 32 ಕೋಟಿ ರೂ ಸಾಲ ನೀಡಿ, ಸಹಕಾರಿ ಕ್ಷೇತ್ರದ ಮಹತ್ವವನ್ನು ಸಮಾಜಕ್ಕೆ ತೋರಿಸಿದ್ದೇವೆ ಎಂದರು.
ಸಹಕಾರಿ ರಂಗದಿಂದ ಮಾತ್ರ ಅಭಿವೃದ್ದಿ ಸಾಧ್ಯ, ಶಾಸಕ ಶ್ರೀನಿವಾಸಗೌಡರು, ಸಣ್ಣ ಸೊಸೈಟಿಯಿಂದಲೇ ಇಂದು ಅಂತರರಾಷ್ಟ್ರೀಯ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದರು ಎಂದು ತಿಳಿಸಿ, ದೊಡ್ಡವರಿಗೆ ಮಾತ್ರ ಸಾಲ ನೀಡುವ ವಾಣಿಜ್ಯ ಬ್ಯಾಂಕುಗಳಿಂದ ನಿಮ್ಮ ಖಾತೆ ಹೊರತನ್ನಿ ಡಿಸಿಸಿ ಬ್ಯಾಂಕಿನಲ್ಲಿಡಿ ಎಂದು ಕೋರಿದರು.
ನರಸಾಪುರ ಎಸ್‍ಎಫ್‍ಸಿಎಸ್ ಅಧ್ಯಕ್ಷ ಕೆ.ಎಂ.ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 43 ಹಳ್ಳಿಗಳ ವ್ಯಾಪ್ತಿ ಹೊಂದಿರುವ ಸೊಸೈಟಿಯಿಂದ 550 ರೈತರಿಗೆ 8 ಕೋಟಿ ರೂ ಸಾಲ ನೀಡಿದ್ದೇವೆ, 24 ಕೋಟಿರೂ ತಾಯಂದಿರಿಗೆ ಬಡ್ಡಿರಹಿತ ಸಾಲ ವಿತರಿಸಿದ್ದೇವೆ ಎಂದರು.
ಸರ್ಕಾರಗಳ ಸಾಲ ಮನ್ನಾ ಯೋಜನೆಯಿಂದಾಗಿ 5.90 ಕೋಟಿ ರೂ ಮನ್ನಾ ಆಗಿ ರೈತರಿಗೆ ಪ್ರಯೋಜನವಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯ ಕನಿಷ್ಟ 400 ರೈತರಿಗೆ ಕೆಸಿಸಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ನರಸಾಪುರ ಎಸ್‍ಎಫ್‍ಸಿಎಸ್ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ವಾಸುದೇವ್, ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಕೆಇಬಿ ಚಂದ್ರಣ್ಣ, ಮೋಹನ್,ಈರಣ್ಣ, ಚೆನ್ನರಾಯಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷೆ ಸರೋಜಮ್ಮ,ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ತಾಪಂ ಸದಸ್ಯ ಮಂಜುನಾಥ್, ಮುಖಂಡರಾದ ಅಶ್ವಥ್ಥ್,ವೆಂಕಟೇಶ್, ಕೃಷ್ಣಪ್ಪ, ರಾಜಣ್ಣ, ಆಂಜಿನಪ್ಪ, ಲಿಂಗಣ್ಣ, ಅನಿಲ್, ಮುರಳಿ ಮತ್ತಿತರರಿದ್ದರು.