ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋವಿಡ್ ತಡೆಗೆ ಮುನ್ನಚ್ಚರಿಕೆ-70 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ
20906 ನೋಂದಣಿ-ಸುಗಮ ಪರೀಕ್ಷೆಗೆ ಸಕಲ ಸಿದ್ದತೆ-ನಾಗೇಂದ್ರಪ್ರಸಾದ್
ಕೋಲಾರ:- ಕೋವಿಡ್ ಆತಂಕದ ನಡುವೆಯೇ ಸಕಲ ರೀತಿಯ ಮುಂಜಾಗ್ರತೆ ವಹಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ಜಿಲ್ಲಾದ್ಯಂತ 70 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದ್ದು, 20906 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಡಿಡಿಪಿಐ ಕೆ.ರತ್ನಯ್ಯ ನೇತೃತ್ವದಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು ಈಗಾಗಲೇ ಜಿಲ್ಲೆಯ ಎಲ್ಲಾ ಕೇಂದ್ರಗಳಿಗೂ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಿದ್ದು, ಶಾಲೆಗಳ ಸ್ಯಾನಿಟೈಸ್ ಕಾರ್ಯ ಮುಗಿದಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
354 ಪ್ರೌಢಶಾಲೆ : 20906 ವಿದ್ಯಾರ್ಥಿಗಳು
ಹೊಸದಾಗಿ ಪರೀಕ್ಷೆ ತೆಗೆದುಕೊಂಡಿರುವ ಶಾಲಾ ವಿದ್ಯಾರ್ಥಿಗಳು 19727 ಮಂದಿ ಹೊಸ ಖಾಸಗಿ ಅಭ್ಯರ್ಥಿಗಳು 371, ಸಿಸಿಇಪುನರಾವರ್ತಿತ ಅಭ್ಯರ್ಥಿಗಳು 582, ಸಿಸಿಇ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು 209, ಹೊಸ ಸ್ಕೀಂ ಪುನರಾವರ್ತಿತ ಅಭ್ಯರ್ಥಿಗಳು 16 ಹಾಗೂ ನ್ಯೂಸ್ಕೀಂ ಖಾಸಗಿ ಅಭ್ಯರ್ಥಿಗಳು ಕೇವಲ 01 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು.
ಇದರಲ್ಲಿ 10541 ಮಂದಿ ಬಾಲಕರು ಹಾಗೂ 10365 ಮಂದಿ ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಕೇಂದ್ರಗಳಲ್ಲಿ ಮೂಲಸೌಲಭ್ಯ, ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರಕ್ಕೆ ಬಾಕ್ಸ್ ರಚನೆ, ಸ್ಯಾನಿಟೈಸ್, ಮಕ್ಕಳಿಗೆ ತಲಾ 2 ಮಾಸ್ಕ್ಗಳ ವಿತರಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಕುರಿತು ಗಮನ ಹರಿಸಲಾಗಿದೆ ಎಂದರು.
ತಾಲ್ಲೂಕುವಾರು
ವಿದ್ಯಾರ್ಥಿಗಳ ವಿವರ
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಗೆ ಸಂಬಂಧಿಸಿದಂತೆ ಬಂಗಾರಪೇಟೆ ತಾಲ್ಲೂಕಿನಲ್ಲಿ 3437 ಮಂದಿ, ಕೆಜಿಎಫ್-2693, ಕೋಲಾರ-5366, ಮಾಲೂರು 3169, ಮುಳಬಾಗಿಲು-3353 ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 2888 ಮಂದಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.
ಅದೇ ರೀತಿ ಬಂಗಾರಪೇಟೆಯ 11, ಕೆಜಿಎಫ್ನ 9, ಕೋಲಾರದ 17, ಮಾಲೂರಿನ 9, ಮುಳಬಾಗಿಲಿನ 11 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 13 ಸೇರಿದಂತೆ 70 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಕೋವಿಡ್ ಹಿನ್ನಲೆ
ಹೆಚ್ಚುವರಿ ಸಿಬ್ಬಂದಿ
ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದ್ದು, ಸುಗಮ ಪರೀಕ್ಷೆಗೆ ಮುಖ್ಯ ಅಧೀಕ್ಷಕರು, ಅಭಿರಕ್ಷಕರು, ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾಕರು ಸೇರಿದಂತೆ ಒಟ್ಟು 2000 ಕ್ಕೂ ಹೆಚ್ಚು ಮಂದಿ ಪರೀಕ್ಷಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರತಿ ಕೇಂದ್ರಕ್ಕೆ ಇಬ್ಬರು ದೈಹಿಕ ಶಿಕ್ಷಕರು, ಓರ್ವ ಮೊಬೈಲ್ ಸ್ವಾಧೀನಾಧಿಕಾರಿ, ಸ್ಕೌಟ್ಸ್ಗೈಡ್ಸ್ನಿಂದ ಇಬ್ಬರು ಸ್ವಯಂಸೇವಕರು ಈ ಬಾರಿ ಹೆಚ್ಚುವರಿಯಾಗಿ ನೇಮಿಸಿಕೊಳ್ಳಲಾಗಿದ್ದು, ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆಲ್ಲಾ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ.
ಆರೋಗ್ಯ ಸಹಾಯಕಿ : ಆಶಾಕಾರ್ಯಕರ್ತರು
ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲಾ ಇಬ್ಬರು ಆಶಾ ಕಾರ್ಯಕರ್ತೆಯರು ಹಾಗ ಓರ್ವ ಆರೋಗ್ಯ ಸಹಾಯಕರು ಹಾಜರಿದ್ದು, ಕೇಂದ್ರಕ್ಕೆ ಬರುವ ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸ್ ನೀಡಿ ಒಳ ಕಳುಹಿಸುವರು. ಈ ಕಾರ್ಯ ಬೆಳಗ್ಗೆ 7-30ರಿಂದಲೇ ನಡೆಯಲಿದ್ದು, ಹೊರ ಭಾಗದಲ್ಲಿ ಗುಂಪು ಸೇರದಂತೆ ಮುನ್ನಚ್ಚರಿಕೆ ವಹಿಸಲಾಗಿದೆ.
ಶಿಕ್ಷಕರಿಗೂ ಮಾಸ್ಕ್, ಗ್ಲೌಸ್ ಕಡ್ಡಾಯ, ಮಕ್ಕಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಲಾಗಿದೆ, ಅಗತ್ಯವಿದ್ದಲ್ಲಿ ಕೇಂದ್ರದಲ್ಲೇ ಬಳಸಿ ಬಿಸಾಡುವ ಲೋಟಗಳಲ್ಲಿ ನೀರು ಕೊಡಲು ವ್ಯವಸ್ಥೆ ಮಾಡಲಾಗಿದೆ.
ಕಂಟೈನ್ಮೆಂಟ್ನಿಂದ 31 ಮಕ್ಕಳ ಹಾಜರಿ
ಪ್ರತಿ ಕೇಂದ್ರದಲ್ಲೂ ಮೂರು ಪ್ರತ್ಯೇಕ ವಿಶೇಷ ಕೊಠಡಿಗಳನ್ನು ಮೀಸಲಿಡಲಾಗಿದೆ. ಒಂದು ಕೊಠಡಿ ವಿಕಲಚೇತನರಿಗೆ, ಮತ್ತೊಂದು ಕೊಠಡಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ನಲ್ಲಿ ಜ್ವರ ಕಂಡು ಬರುವ ಮತ್ತು ಸೋಂಕಿನ ಲಕ್ಷಣಗಳಿರುವ ಮಕ್ಕಳಿಗೆ ಹಾಗೂ ಮತ್ತೊಂದು ಕೊಠಡಿ ಕಂಟೈನ್ ಮೆಂಟ್ಝೋನ್ ನಿಂದ ಬರುವ ಮಕ್ಕಳಿಗೆ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಕಂಟೈನ್ಮೆಂಟ್ ಝೋನ್ಗಳಿಂದ ಜಿಲ್ಲಾದ್ಯಂತ 31 ವಿದ್ಯಾರ್ಥಿಗಳು ಪರೀಕ್ಷೆಗೆ ಬರಲಿದ್ದು, ಅವರಿಗೆಲ್ಲಾ ಎನ್-95 ಮಾಸ್ಕ್ ವಿತರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸ್ಥಾನಿಕ ಜಾಗೃತಿದಳಕ್ಕೆ ವಿಶೇಷ ವೀಕ್ಷಕರ ನೇಮಕ
ಜಿಲ್ಲೆಯ ಎಲ್ಲಾ 70 ಕೇಂದ್ರಗಳಲ್ಲೂ ಪರೀಕ್ಷೆ ಸುಗಮವಾಗಿನಡೆಯಲು 73 ಮಂದಿ ಮುಖ್ಯ ಅಧೀಕ್ಷಕರು, 73 ಮಂದಿ ಅಭಿರಕ್ಷರು,ಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃದಳ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದರು.
ಇದರೊಂದಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಇತರೆ ಇಲಾಖೆಗಳ ಜಿಲ್ಲಾ, ತಾಲ್ಲೂಕುಮಟ್ಟದ ಅಧಿಕಾರಿಗಳನ್ನು ಪ್ರತಿಕೇಂದ್ರಕ್ಕೂ ಒಬ್ಬರಂತೆ ವಿಶೇಷವೀಕ್ಷಕರನ್ನು ನೇಮಿಸಿದ್ದು, ಜಾಗೃತದಳಗಳು ಕಾರ್ಯನಿರ್ವಹಿಸಲಿವೆ ಎಂದರು.
144ನೇ ಸೆಕ್ಷನ್ ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದು, ಭದ್ರತೆಗೆ ಪ್ರತಿಯೊಂದು ಕೇಂದ್ರಕ್ಕೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕಾರ್ಯದ ಸಮಯಪಾಲನೆ
ಬೆಳಗ್ಗೆ 7-30 ರಿಂದಲೇ ಕೇಂದ್ರ ಓಪನ್ ಇರಲಿದ್ದು, ಬರುವ ಮಕ್ಕಳು ಗುಂಪುಗೂಡದಂತೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಲಾಗುವುದು, 10 ಗಂಟೆಯವರೆಗೂ ಧ್ವನಿವರ್ಧಕದ ಮೂಲಕ ಮಕ್ಕಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಿದ್ದು, ಅದನ್ನು ಪಾಲಿಸಬೇಕು.
10-10ಕ್ಕೆ ಕೊಠಡಿಗಳಿಗೆ ಮೇಲ್ವಿಚಾರಕರು ಆಗಮಿಸಿ ಉತ್ತರ ಪತ್ರಿಕೆಗಳನ್ನು ವಿತರಿಸುವರು. 10-20ಕ್ಕೆ ಪ್ರಶ್ನೆಪತ್ರಿಕೆಗಳನ್ನು ಮುಖ್ಯಅಧೀಕ್ಷಕರು ಹಾಗೂ ಅಭಿರಕ್ಷಕರು ಕೊಠಡಿಗಳಿಗೆ ತಲುಪಿಸಲಿದ್ದು 10-30ಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ವಿತರಿಸಬೇಕು. 10-45 ರವರೆಗೂ ಮಕ್ಕಳು ಪ್ರಶ್ನೆಪತ್ರಿಕೆ ಓದಲು ಅವಕಾಶ ಇರುತ್ತದೆ.
ಪರೀಕ್ಷೆಯೂ ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳಿಗೆ 10-30 ರಿಂದ 1-30 ಹಾಗೂ ಇತರೆ ವಿಷಯಗಳಿಗೆ 10-30 ರಿಂದ 1-45 ರವರೆಗೂ ಮಕ್ಕಳಿಗೆ ಬರೆಯಲು ಅವಕಾಶ ಇರುತ್ತದೆ ಎಂದರು.
ಅಧಿಕಾರಿಗಳಿಂದ ಶುಭ ಹಾರೈಕೆ
ವಿದ್ಯಾರ್ಥಿ ಸಮುದಾಯ ವದಂತಿಗಳಿಗೆ ಕಿವಿಗೊಡದೇ, ಖಿನ್ನರಾಗದೇ ವಿಚಲಿತರಾಗದೇ ಪರೀಕ್ಷೆ ಬರೆದು ಗುಣಾತ್ಮಕ ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್ ಬಾಬು, ಬಿಇಒಗಳಾದಕೆ.ಎಸ್.ನಾಗರಾಜಗೌಡ, ಕೃಷ್ಣಮೂರ್ತಿ, ಕೆಂಪಯ್ಯ, ಉಮಾದೇವಿ, ಗಿರಿಜೇಶ್ವರಿದೇವಿ,ಶಂಕರ್ಕವಾಲಿ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯಿತ್ರಿ ಮತ್ತಿತರರು ಶುಭ ಹಾರೈಸಿದ್ದಾರೆ.