ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗುತ್ತಿದೆ – ಹೆಚ್ ನಾಗೇಶ್
ಕೋಲಾರ : ಸರ್ಕಾರದಿಂದ ಬರುತ್ತಿರುವ ಸಂಪೂರ್ಣ ಅನುದಾನವನ್ನು ಸಮರ್ಪಕ ಬಳಕೆ ಮಾಡಲಾಗುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ಅವರು ತಿಳಿಸಿದರು.
ಇಂದು ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2 ವರ್ಷದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡಲು ಶ್ರಮಿಸಿದ್ದು, ಸಾಕಷ್ಟು ಪ್ರಗತಿಯಾಗಿದೆ ಇನ್ನೂಳಿದ 3 ವರ್ಷಗಳ ಕಾಲ ಸರ್ಕಾರದ ವಿವಿಧ ಯೋಜನೆಗಳಲ್ಲಿ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಂಪೂರ್ಣವಾಗಿ ತಲುಪಿಸುತ್ತೇನೆ ಎಂದರು.
ಕರೋನ ಸೋಂಕಿನಿಂದ ಇಡೀ ದೇಶವೇ ಬಳಲುತ್ತಿದೆ, ಈ ಸೋಂಕಿನಿಂದ ಬಹಳಷ್ಟು ತೊಂದರೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 44 ಕರೋನ ಸೋಂಕು ದೃಢ ಪಟ್ಟಿದ್ದು, 26 ಜನ ಗುಣಮುಖರಾಗಿದ್ದಾರೆ ಇನ್ನುಳಿದ 18 ಜನ ಗುಣಮುಖರಾಗಬೇಕಿದೆ ಅವರು ಸಹ ಗುಣಮುಖರಾಗುತ್ತಾರೆ. ಕರೋನಾ ಹಿನ್ನೆಲೆ ಎಲ್ಲ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರದ ಮೂಲಕ ತಮ್ಮ ತಮ್ಮ ಕೆಲಸವನ್ನು ನಿರ್ವಹಿಸಬೇಕು ಎಂದರು.
ಲಕ್ಕೂರು ದೊಡ್ಡ ಗ್ರಾಮವಾಗಿದ್ದು, ನೆರೆಯ ತಮಿಳುನಾಡು ರಾಜ್ಯಕ್ಕೆ ಹತ್ತಿರವಾಗಿದೆ ಹಾಗೂ ಬೆಂಗಳೂರು ನಗರದ ಸನಿಹದಲ್ಲಿದೆ. ಈ ಭಾಗದ ನಾಗರಿಕರು ಜಾಗೃತಿಯಿಂದ ಇರಬೇಕು. ಲಕ್ಕೂರು ಗ್ರಾಮ ಪಂಚಾಯಿತಿ ಕಟ್ಟಡವು ಉತ್ತಮವಾಗಿ ನಿರ್ಮಾಣ ಮಾಡಲಾಗಿದೆ. ಇಂದಿನ ಜನಪ್ರತಿನಿಧಿಗಳು ವಿದ್ಯಾವಂತರಾಗಿದ್ದು, ಅವರಲ್ಲಿ ಅರಿವು ಬಹಳ ಇದೆ ಎಂದು ತಿಳಿಸಿದರು.
ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ವೈ ನಂಜೇಗೌಡ ಅವರು ಮಾತನಾಡಿ, ಪಕ್ಷಾತೀತವಾಗಿ ಕೆಲಸ ಮಾಡಬೇಕು ಆಗ ಆಡಳಿತ ಕೊಟ್ಟ ಎಲ್ಲರಿಗೂ ಗೌರವ ಸಿಗುತ್ತದೆ. ಲಕ್ಕೂರಿನಿಂದ ಚಿಕ್ಕ ತಿರುಪತಿ, ಹೊಸೂರು ರಸ್ತೆಯಿಂದ ಚಿಕ್ಕ ತಿರುಪತಿ, ಕೋಡಿಹಳ್ಳಿ ಗೇಟ್ ಇಂದ ನಾರಾಯಣಕೆರೆ, ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ ಸಂಪಂಗೆರೆ ಬಾರ್ಡರ್ ಇಂದ ಮಾಲೂರು ರಸ್ತೆಯು ಮುಕ್ತಾಯ ಹಂತಕ್ಕೆ ತಲುಪಿದೆ ಎಂದ ಅವರು ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ ಕೇಂದ್ರ, ಬಸ್ ತಂಗುದಾಣವನ್ನು ಉದ್ಘಾಟನೆ ಮಾಡಿದರು. ಲಕ್ಕೂರು ಹೋಬಳಿಯ ವ್ಯಾಪ್ತಿಯ ಬಾಣಂತಿಯರಿಗೆ ಭಾಗ್ಯಲಕ್ಷೀ ಬಾಂಡ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್ ಮುನಿಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಭಾಗ್ಯವತಿ ಅಗ್ರಿ ನಾರಾಯಣಪ್ಪ, ತಹಸೀಲ್ದಾರರಾದ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೋಡಿಹಳ್ಳಿ ಮಂಜುನಾಥ್, ಲಕ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಬ್ಬಮ್ಮ ಕೃಷ್ಣಪ್ಪ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ಲಕ್ಕೂರು ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.