ವ್ಯಕ್ತಿಯ ಜೀವನದಲ್ಲಿ ಬಾಲ್ಯಾವಸ್ಥೆಯು ಪ್ರಮುಖ ಘಟ್ಟ – ಸಿ. ಸತ್ಯಭಾಮ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ವ್ಯಕ್ತಿಯ ಜೀವನದಲ್ಲಿ ಬಾಲ್ಯಾವಸ್ಥೆಯು ಪ್ರಮುಖ ಘಟ್ಟ – ಸಿ. ಸತ್ಯಭಾಮ

 

 

 

 

ಕೋಲಾರ : ಒಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಬಾಲ್ಯ, ಯೌವ್ವನ, ವೃದ್ಧಾಪ್ಯ ಮತ್ತು ವಾನಪ್ರಸ್ಥ ವ್ಯವಸ್ಥೆಗಳೆಂಬ 4 ಘಟ್ಟಗಳನ್ನು ಹೊಂದಿದ್ದು, ಇವುಗಳಲ್ಲಿ ಬಾಲ್ಯ ವ್ಯವಸ್ಥೆಯು ಜೀವನದ ಪ್ರಮುಖ ಘಟ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಸಿ.ಸತ್ಯಭಾಮ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಇವರ ಸಹಯೋಗದಲ್ಲಿ ಕೋಲಾರ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಅನಕ್ಷರಸ್ಥ ಹಾಗೂ ಬಡ ಕುಟುಂಬಗಳಲ್ಲಿ ಬಾಲಕಾರ್ಮಿಕ ಪದ್ಥತಿಯನ್ನು ಹೆಚ್ಚಾಗಿ ಕಾಣಬಹುದಾಗಿದೆ. ಇಂತವರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಸಂಸ್ಥೆಯು ವಿಶ್ವಾದ್ಯಂತ ಜೂನ್ 12 ಅನ್ನು ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಎಂದು ಘೋಷಿಸಲಾದೆ. ಪ್ರತಿ ವರ್ಷವು ಭಾರತದಲ್ಲಿಯೂ ಸಹ ಜೂನ್ 12 ರಂದು ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ ಎಂದರು.

ಬಾಲಕಾರ್ಮಿಕ ಪದ್ಧತಿಯು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಒಂದು ಮಗು ತನ್ನ ಬಾಲ್ಯಾವ್ಯವಸ್ಥೆಯನ್ನು ಕಳೆದುಕೊಳ್ಳುತ್ತದೆ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು 2016 ರಲ್ಲಿ ತಿದ್ದುಪಡಿಯನ್ನು ಜಾರಿಗೊಳಿಸಿತು. ಇದರ ಪ್ರಕಾರ 1 ರಿಂದ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಂಡರೆ ಅವರಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪವನೇಶ್.ಡಿ ಅವರು ಮಾತನಾಡಿ, ಭಾರತಕ್ಕೆ ಮೂಲ ಗ್ರಂಥವೇ ಸಂವಿಧಾನ. ಸಂವಿಧಾನದಲ್ಲಿ ಬಾಲಕಾರ್ಮಿಕ ಪದ್ಥತಿಯನ್ನು ತಡೆಗಟ್ಟಲು ಅನೇಕ ಕಾನೂನುಗಳನ್ನು ನೀಡಿದೆ. 1986 ರಲ್ಲಿ ಬಾಲಕಾರ್ಮಿಕ ಪದ್ಥತಿ ವಿರುದ್ಧ ಕಾನೂನನ್ನು ಜಾರಿಗೆ ತರಲಾಯಿತು. 21ಎ ವಿಧಿಯ ಪ್ರಕಾರ 6 ರಿಂದ 14 ವರ್ಷದೊಳಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಸರ್ಕಾರವೇ ಇದರ ಜವಾಬ್ದಾರಿಯನ್ನು ಹೊಂದಿರುತ್ತದೆ. 45 ನೇ ವಿಧಿಯ ಪ್ರಕಾರ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ನಮ್ಮ ದೇಶದ ಪ್ರತಿಯೊಂದು ಮಗುವು ವಿಧ್ಯಾಭ್ಯಾಸ ಪಡೆದುಕೊಂಡರೆ ದೇಶವು ಅಭಿವೃದ್ಧಿ ರಾಷ್ಟ್ರವಾಗಿ, ವಿಶ್ವಕ್ಕೆ ಮಾದರಿಯಾಗುತ್ತದೆ. ಪ್ರತಿಯೊಬ್ಬ ನಾಗರೀಕರು ಜವಾಬ್ದಾರಿಯುತವಾಗಿ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದುಹಾಕುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು. ಸುತ್ತಮುತ್ತಲಿನ ಪ್ರದೇಶದಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಾದ ಗಂಗಾಧರ್ ಸಿ.ಎಸ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀಕಾಂತ್ ಬಿ.ಪಾಟೀಲ್, ಕೋಲಾರ ವಕೀಲರ ಸಂಘದ ಅಧ್ಯಕ್ಷರಾದ ಜಿ. ಶ್ರೀಧರ್, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಘುಪತಿಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರತ್ನಯ್ಯ ಅವರು ಸೇರಿದಂತೆ ಮತ್ತಿತರರು ಉಪಸ್ಥತಿತರಿದ್ದರು.