ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಜನಾಭಿಪ್ರಾಯವಿಲ್ಲದೆ 1961ರ ಕರ್ನಾಟಕ ಭೂಸುಧಾರಣೆ ಕಾಯಿದೆಗೆ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿರುವುದು ಖಂಡನೀಯ
ಕೋಲಾರ ಜನಾಭಿಪ್ರಾಯವಿಲ್ಲದೆ 1961ರ ಕರ್ನಾಟಕ ಭೂಸುಧಾರಣೆ ಕಾಯಿದೆಗೆ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿರುವುದು ಖಂಡನೀಯವಾಗಿದ್ದು, ರೈತ ವಿರೋಧಿ ಕಾಯಿದೆ ತಿದ್ದುಪಡಿ ಆದೇಶವನ್ನು ಕೂಡಲೇ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಮುಖಾಂತರ ರೈತಸಂಘದಿಂದ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, 1961 ಕರ್ನಾಟಕ ಭೂಸುಧಾರಣಾ ಕಾಯಿದೆ ತಿದ್ದುಪಡಿ ಮಾಡುವುದರಿಂದಾಗಿ ಕೃಷಿ ಭೂಮಿಯನ್ನು ಯಾರೇ ಕೊಂಡುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ.
ಇದರಿಂದಾಗಿ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಾಗಲಿದ್ದು, ರೈತರನ್ನು ಬೀದಿಗೆ ತಳ್ಳಿ, ಉದ್ಯಮಿಗಳು, ರಿಯಲ್ ಎಸ್ಟೇಟ್‍ನವರು, ಕೋಟ್ಯಂತರರೂಪಾಯಿ ವ್ಯವಹಾರಗಳನ್ನು ನಡೆಸುವವರಿಗೆ ಸುಲಭವಾಗಿ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾದಿಂದ ಎಲ್ಲ ವರ್ಗದ ಜನರೂ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಹೊರಬರುವುದೇ ಸವಾಲು ಆಗಿರುವ ಸಂದರ್ಭದಲ್ಲಿ ಸರ್ಕಾರಗಳು ಜನರು, ರೈತರ ಬಗ್ಗೆ ಯಾವುದೇ ಯೋಚನೆ ಮಾಡದೆ, ಯಾರ ಬಳಿಯೂ ಚರ್ಚಿಸದೆ ಏಕಾಏಕಿ ಎಪಿಎಂಸಿ, ವಿದ್ಯುತ್ ಸೇರಿದಂತೆ ಇನ್ನಿತರೆ ಕಾಯಿದೆಗಳ ತಿದ್ದುಪಡಿಗೆ ಮುಂದಾಗಿರುವಂತೆಯೇ ಇದೀಗ ಭೂಸುಧಾರಣೆ ಕಾಯಿದೆ ಕಡೆಗೂ ಬಂದಿರುವುದು ರೈತ ವಿರೋಧಿ ಧೋರಣೆಯಾಗಿದೆ. ಸರ್ಕಾರಗಳು ಕೂಡಲೇ ಈ ಆದೇಶವನ್ನು ಕೈಬಿಡಬೇಕಿದ್ದು, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರ ಇನ್ನೊಂದು ಮುಖ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಈ ಮೊದಲು 25 ಲಕ್ಷರೂ ವರೆಗೆ ಕೃಷಿಯೇತರ ಆದಾಯ ಹೊಂದಿರುವವರು ಮಾತ್ರ ಕೃಷಿ ಭೂಮಿ ಖರೀದಿಸಬಹುದಾಗಿತ್ತು. ಈ ನಿರ್ಬಂಧ ತೆರವಾಗುವುದರಿಂದ ಹಣವುಳ್ಳವರಿಗೆ ಜಮೀನು ಖರೀದಿಸಲು ಸುಲಭವಾಗಲಿದೆ.
ಕೃಷಿಕರಲ್ಲಿ ಶೇ.80ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಹವಾಮಾನ ವೈಫರೀತ್ಯ, ಬೆಳೆ ಹಾನಿ ಮತ್ತಿತರ ಕಾರಣದಿಂದ ಈ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾಎ. ಒಮ್ಮೆಲೇ ಕೈತುಂಬ ಹಣ ಸಿಗುವ ಆಸೆಯಿಂದ ಮುಂದಿನ ತಮ್ಮ ಜೀವನದ ಪರಿಸ್ಥಿತಿಯ ಬಗ್ಗೆ ಅರಿವಿಲ್ಲದೆ ಭೂಮಿ ಮಾರಾಟ ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚಾಗಿದ್ದು, ಒಮ್ಮೆ ಭೂಮಿ ಕಳೆದುಕೊಂಡರೆ ಆ ರೈತ ಬೀದಿಗೆ ಬರುತ್ತಾನೆಯೇ ಹೊರತು ಎಂದಿಗೂ ಜಮೀನು ಖರೀದಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕಾಯಿದೆ ತಿದ್ದುಪಡಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ತಮ್ಮ ಮನವಿಯನ್ನು ಸಚಿವರಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.
ಮನವಿ ನೀಡುವಾಗ ರೈತಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ಭಾರ್ಗವ್ ಮತ್ತಿತರರು ಉಪಸ್ಥಿತರಿದ್ದರು.