ಕೆ.ಸಿ.ವ್ಯಾಲಿ ನೀರು ಕೋಲಾರದ ಕೆರೆಗಳಿಗೆ ಹರಿಸುವ ಮೊದಲು ಮುಂಜಾಗ್ರತಾ ಕ್ರಮ ಅಗತ್ಯ – ಎಸ್.ಆರ್.ಮುರಳಿಗೌಡ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

 

ಕೆ.ಸಿ.ವ್ಯಾಲಿ ನೀರು ಕೋಲಾರದ ಕೆರೆಗಳಿಗೆ ಹರಿಸುವ ಮೊದಲು ಮುಂಜಾಗ್ರತಾ ಕ್ರಮ ಅಗತ್ಯ – ಎಸ್.ಆರ್.ಮುರಳಿಗೌಡ

 

 

 

 

ಕೋಲಾರ ಮೇ 29: ಕೋಲಾರ ನಗರದ ಕುಡಿಯುವ ನೀರಿನ ಮೂಲವಾದ ಅಮ್ಮೇರಹಳ್ಳಿ, ಮಡೇರಹಳ್ಳಿ, ಕೋಡಿಕಣ್ಣೂರು ಮತ್ತು ಕೋಲಾರಮ್ಮ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರನ್ನು ಹರಿಸುವ ಮೊದಲು ಕೆರೆಗಳಲ್ಲಿರುವ ಕೊಳವೆ ಬಾವಿಗಳ ಸುತ್ತ ಕಟ್ಟೆಕಟ್ಟಿ, ಅನುಪಯುತ್ತ ಕೊಳವೆಬಾವಿಗಳಿಗೆ ಮರಳು ತುಂಬಿಸುವ ಕೆಲಸವಾಗಬೇಕೆಂದು ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ ಒತ್ತಾಯಿಸಿದ್ದಾರೆ.
ಬಯಲು ಸೀಮೆಯ ಮಹತ್ವಪೂರ್ಣ ಯೋಜನೆಯಾದ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ನೀಡುತ್ತಿರುವ ಕೆ.ಸಿ.ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದ್ದು. ಈಗಾಗಲೇ ಜಿಲ್ಲೆಯ ಹಲವಾರು ಕೆರೆಗಳಿಗೆ ನೀರು ಹರಿಸಲಾಗಿದೆ. ಈ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲವೆಂದು ಕೇವಲ ಅಂತರ್ಜಲ ಅಭಿವೃದ್ಧಿಯ ಮೂಲವೆಂದು ಎಲ್ಲರಿಗೂ ತಿಳಿದ ವಿಷಯವೆ.
ಕೋಲಾರ ನಗರಕ್ಕೆ ಕೊಳವೆ ಬಾವಿ ಮೂಲಕ ಕುಡಿಯುವ ನೀರು ಬಳಕೆ ಮಾಡುತ್ತಿರುವ ಅಮ್ಮೇರಹಳ್ಳಿ ಕರೆ, ಮಡೇರಹಳ್ಳಿಕರೆ, ಕೊಡಿಕಣ್ಣೂರು ಕೆರೆ ಮತ್ತು ಕೋಲಾರಮ್ಮ ಅಮಾನಿಕೆರೆ ಗಳಿಗೂ ಕೆ.ಸಿ.ವ್ಯಾಲಿ ನೀರನ್ನು ತುಂಬಿಸಲು ಹೊರಟಿದ್ದು, ಕೆರೆಗಳನ್ನು ಈಗಾಗಲೇ ಸ್ಚಚ್ಚಗೊಳಿಸುವ ಕಾರ್ಯ ನಡೆದಿದೆ. ಇದರೊಂದಿಗೆ ಈ ಕೆರೆಗಳಲ್ಲಿ ಅನುಪಯುಕ್ತ ಬೋರ್‍ವೆಲ್‍ಗಳಿಗೆ ಮರಳು ತುಂಬಿಸುವ ಕಾರ್ಯವಾಗಬೇಕು ಮತ್ತು ಬಳಕೆ ಮಾಡಲು ಯೋಗ್ಯವಿರುವ ಕೊಳವೆ ಬಾವಿಗಳಿಗೆ ಕಟ್ಟೆಕಟ್ಟಿ ರಿವೀಟ್‍ಮೆಂಟ್ ಕೆಲಸವಾಗಬೇಕು. ಆನಂತರ ಮೇಲ್ಕಂಡ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸುವುದು ಸೂಕ್ತವಾಗಿದೆ.
ಈಗಾಗಲೇ ಮಡೇರಹಳ್ಳಿ ಕೆರೆ ತುಂಬಿ, ಅಮ್ಮೇರಹಳ್ಳಿ ಕೆರೆಗೆ ನೀರು ಹರಿದು ಬರುತ್ತಿದೆ. ಈ ನೀರು ಕೆರೆಗಳಲ್ಲಿ ಹಿಂಗದೆ ನೇರವಾಗಿ ಕೆರೆಯಲ್ಲಿರುವ ಕೊಳವೆ ಬಾವಿಗಳಗೆ ಸೇರಿದರೆ, ಅಂತರ್ಜಲ ಪೂರ್ಣ ಕಲುಶಿತವಾಗುತ್ತದೆ. ಈ ನೀರನ್ನು ಸಂಪರ್ಕವಿರುವ ಕೊಳವೆ ಬಾವಿ ಮೂಲಕ ಬಳಕೆ ಮಾಡಿದರೆ ಸಾಂಕ್ರಾಮಿಕ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕೋಲಾರದ ನಗರದ ಜನತೆಯ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ ಈ ವಿಚಾರದ ಬಗ್ಗೆ ಈಗಾಗಲೇ ಹಲವಾರು ಬಾರಿ ಕೋಲಾರ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಿಲ್ಲ ಎಂದು ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ ಆರೋಪಿಸಿದ್ದಾರೆ.