ತಾರಸಿ ತೋಟದಲ್ಲಿ ಡ್ರಾಗನ್ ಹಣ್ಣು ಬೆಳೆಸಿ ಮಾದರಿಯಾದ ರೈತ

 

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ತಾರಸಿ ತೋಟದಲ್ಲಿ ಡ್ರಾಗನ್ ಹಣ್ಣು ಬೆಳೆಸಿ ಮಾದರಿಯಾದ ರೈತ

 

 

 

ಇತ್ತೀಚಿನ ದಿನಗಳಲ್ಲಿ ಸ್ಥಳದ ಅಭಾವದಿಂದ ಕೈತೋಟ ಮಾಡುವುದು ಕಡಿಮೆಯಾಗಿದ್ದು ತಾರಸಿ ತೋಟಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ತಾರಸಿ ತೋಟಕ್ಕೆ ಹೆಚ್ಚಿನ ಮನ್ನಣೆ ಇದೆ. ತಾರಸಿ ತೋಟ ಮಾಡುವುದರಿಂದ ಒಂದು ಕುಟುಂಬಕ್ಕೆ ಬೇಕಾದಷ್ಟು ತರಕಾರಿಗಳನ್ನು ತಾವೇ ಬೆಳೆದುಕೊಂಡು ಗುಣಮಟ್ಟದ ಬೆಳೆಯಿಂದ ಅಪೌಷ್ಟಿಕತೆಯನ್ನು ನಿವಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಹೆಚ್ಚುವರಿಯಾಗಿ ಬಂದ ಫಸಲನ್ನು ಮಾರಿ ಹೆಚ್ಚುವರಿ ಆದಾಯ ಕೂಡ ಗಳಿಸಬಹುದಾಗಿದೆ.
ಈ ದಿಶೆಯಲ್ಲಿ ಕೋಲಾರದ ಕನಕಪಾಳ್ಯದ ನಿವಾಸಿ ಶಿವಣ್ಣ ರವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಹಣ್ಣು ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾ. ಸತೀಶ ಪತ್ತೇಪೂರ ಹಾಗೂ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ತೋಟಗಾರಿಕೆ ವಿಜ್ಞಾನಿ ಡಾ. ನಾಗರಾಜ ರವರ ಸಲಹೆ ಮೇರೆಗೆ ತಮ್ಮ ತಾರಸಿಯಲ್ಲಿ ವಿವಿಧ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವುದರ ಜೊತೆಗೆ ಡ್ರಾಗನ್ ಹಣ್ಣು ಕೂಡ ಬೆಳೆದು ಉತ್ತಮ ಫಸಲನ್ನು ತೆಗೆದು ಹೆಚ್ಚಿನ ಆದಾಯ ಕಂಡುಕೊಂಡು ಇತರ ನಗರ ಪ್ರದೇಶ ನಿವಾಸಿಗಳಿಗೆ ಹಾಗೂ ರೈತರಿಗೆ ಮಾದರಿಯಾಗಿದ್ದಾರೆ.
ಇವರ ತಾರಸಿ ತೋಟದಲ್ಲಿ ಟೊಮ್ಯಾಟೊ, ಬದನೆ, ಮೆಣಸಿನಕಾಯಿ, ನುಗ್ಗೆ, ಹಸಿರು ಸೊಪ್ಪುಗಳು ಕುಂಬಳ ಜಾತಿಯ ಗಿಡಗಳು ಮತ್ತು ಹಣ್ಣಿನ ಬೆಳೆಯಾದ ದ್ರಾಕ್ಷಿ, ಪಪಾಯ ಮತ್ತು ಡ್ರಾಗನ್ ಹಣ್ಣು ಹಾಗೂ ಹೂವಿನ ಬೆಳೆಯಾದ ಕಣಗಿಲೆ, ಗುಲಾಬಿ ಮತ್ತು ಮಲ್ಲಿಗೆ ಹಾಗೂ ಇನ್ನಿತರ ಔಷಧಿಯ ಗಿಡಗಳು ಕೂಡ ಇವೆ. ಈ ಎಲ್ಲಾ ಬೆಳೆಗಳಿಗೆ ತಮ್ಮ ಮನೆಯ ತರಕಾರಿ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ಮಾಡಿ ತಾರಸಿಯ ಗಿಡಗಳಿಗೆ ಬಳಸುತ್ತಾರೆ. ಹಾಗೂ ನೀರಿನ ನಿರ್ವಹಣೆಯಲ್ಲಿ ಮಳೆಗಾಲದಲ್ಲಿ ಮಾಳಿಗೆಯ ಮೇಲೆ ಬಿದ್ದ ನೀರನ್ನು ಪೈಪುಗಳ ಮೂಲಕ ಟ್ಯಾಂಕ್ ನಲ್ಲಿ ತುಂಬಿಸಿ ಬೆಳೆಗಳಿಗೆ ಉಪಯೋಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂರು ಜೇನು ಪೆಟ್ಟಿಗೆಗಳನ್ನು ಕೂಡ ತಾರಸಿಯಲ್ಲಿಟ್ಟು ಉತ್ತಮ ಲಾಭಗಳಿಸುತ್ತಿದ್ದಾರೆ. ತಾರಸಿ ತೋಟವನ್ನು ಹವ್ಯಾಸವಾಗಿಸಿಕೊಂಡು ಶಿವಣ್ಣರವರು ಹೆಚ್ಚಿನ ಲಾಭಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.


ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಹಾಯದಿಂದ ಡ್ರಾಗನ್ ಹಣ್ಣು ಗಿಡಗಳನ್ನು ಶಿವಣ್ಣರವರಿಗೆ ವಿತರಿಸಿದು,್ದ ಈ ಗಿಡಗಳನ್ನು ಅವರು ತಾರಸಿಯಲ್ಲಿ ಬೆಳೆದು ಹೆಚ್ಚಿನ ಇಳುವರಿ ಪಡೆದು ಮಾರುಕಟ್ಟೆ ಮಾಡುವುದರ ಜೊತೆಗೆ ಗಿಡಗಳನ್ನು ಕೂಡ ತಯಾರು ಮಾಡಿ ಮಾರಿ ಲಾಭಗಳಿಸುತ್ತಿದ್ದಾರೆ- ಡಾ. ನಾಗರಾಜ ಕೆ.ಎಸ್. ತೋಟಗಾರಿಕೆ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಕೋಲಾರ