ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಬೆಳೆಗಾರರಿಗೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಲಹೆ ವಹಿವಾಟು, ಎಚ್ಚರ ವಹಿಸಿ
ಶ್ರೀನಿವಾಸಪುರದದಲ್ಲಿ ಮಾವು ಬೆಳೆಗಾರರು ಹಾಗೂ ಮಂಡಿ ಮಾಲೀಕರ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು
ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನಕಾಯಿ ವಹಿವಾಟು ನಡೆಯುವಾಗ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾವು ಬೆಳೆಗಾರರು ಹಾಗೂ ಮಂಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಈ ಬಾರಿ ವಾತಾವರಣ ವೈಪರೀತ್ಯದಿಂದಾಗಿ ಮಾವಿನ ಫಸಲು ಕಡಿಮೆ ಬಂದಿದೆ. ಇದರಿಂದ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಆದರೆ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಕಂಡು ಬಂದರೆ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಗೊಬ್ಬರ ತಯಾರಿಸಿ: ಕೊಳೆತ ಹಾಗೂ ಬೇಡವಾದ ಕಾಯಿಯನ್ನು ಮಂಡಿ ಹೊರಗಿನ ರಸ್ತೆಗಳ ಪಕ್ಕದಲ್ಲಿ ಸುರಿಯದೆ, ಅರಣ್ಯ ಪ್ರದೇಶದಲ್ಲಿ ಅಗತ್ಯವಿದ್ದಷ್ಟು ಜಮೀನು ಪಡೆದು ಗುಳಿ ತೋಡಿ ಸುರಿಯಬೇಕು. ಸುಗ್ಗಿ ಮುಗಿದ ಮೇಲೆ ಕೊಳೆತ ಕಾಯಿಯ ಮೇಲೆ ಮಣ್ಣು ಮುಚ್ಚಿ ಸಾವಯವ ಗೊಬ್ಬರ ತಯಾರಿಸಬೇಕು ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಮಾತನಾಡಿ, ‘ಮಾವಿನ ಮಂಡಿಗಳಲ್ಲಿ ಕೆಲಸ ಮಾಡಲು ಬರುವ ಜಿಲ್ಲೆಯ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಒದಗಿಸಿದರೆ ಗುರುತಿನ ಚೀಟಿ ನೀಡಲಾಗುವುದು’ ಎಂದರು.
ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾ.ಪಂ. ಇಒ ಎಸ್.ಆನಂದ್, ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್.ಟಿ.ಬಾಲಕೃಷ್ಣ, ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಎಂ.ಗಾಯಿತ್ರಿ, ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ ಮತ್ತಿತರರಿದ್ದರು.
ಕಾರ್ಮಿಕರಿಗೆ ಥರ್ಮಲ್ ಸ್ಕ್ಯಾನಿಂಗ್
ಮಾವು ಬೆಳೆಗಾರರಿಗೆ ನಷ್ಟ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮಾರುಕಟ್ಟೆಗೆ ಬರುವ ಪ್ರತಿ ವಾಹನಕ್ಕೂ ಔಷಧಿ ಸಿಂಪರಣೆ ಮಾಡಲಾಗುವುದು. ಮಾವಿನ ಮಂಡಿಗಳಲ್ಲಿ ದುಡಿಯಲು ಬರುವ ಜಿಲ್ಲೆಯೊಳಗಿನ ಕಾರ್ಮಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಹೊರಗಿನಿಂದ ಬರುವ ಲಾರಿ ಚಾಲಕರು ಹಾಗೂ ವ್ಯಾಪಾರಿಗಳನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.