ಕರೋನಾ ಸಂಕಷ್ಟದಲ್ಲಿ ಪತ್ರಕರ್ತರಿಗೆ ಅಕ್ಕಿ-ಕಲ್ಯಾಣನಿಧಿಗೆ 2ಲಕ್ಷ ನೆರವು ಸಂಘಟಿತ ಪ್ರಯತ್ನದಿಂದ ಜಿಲ್ಲೆಯಲ್ಲಿ ಸೋಂಕಿತರಿಲ್ಲ-ಸಿ.ಆರ್.ಮನೋಹರ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕರೋನಾ ಸಂಕಷ್ಟದಲ್ಲಿ ಪತ್ರಕರ್ತರಿಗೆ ಅಕ್ಕಿ-ಕಲ್ಯಾಣನಿಧಿಗೆ 2ಲಕ್ಷ ನೆರವು
ಸಂಘಟಿತ ಪ್ರಯತ್ನದಿಂದ ಜಿಲ್ಲೆಯಲ್ಲಿ ಸೋಂಕಿತರಿಲ್ಲ-ಸಿ.ಆರ್.ಮನೋಹರ್ 

 

 

 

 

ಕೋಲಾರ:- ಕರೋನಾ ಸಂಕಷ್ಟದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು,ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ಪೊಲೀಸರು, ಸರ್ಕಾರಿ ನೌಕರರು, ಪತ್ರಕರ್ತರ ಸಂಘಟಿತ ಪ್ರಯತ್ನದಿಂದಲೇ ಜಿಲ್ಲೆ ಕರೋನಾ ಮುಕ್ತವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ತಿಳಿಸಿದರು.
ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘಗಳ ಆಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರಿಗೆ ಅಕ್ಕಿ ಮೂಟೆ ವಿತರಿಸಿ, ಭವನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ 10 ಲಕ್ಷ ನೆರವು ಹಾಗೂ ಮಾಧ್ಯಮದವರ ಕಲ್ಯಾಣ ನಿಧಿಗೆ 2 ಲಕ್ಷರೂ ಕೊಡುಗೆ ನೀಡಿ ಅವರು ಮಾತನಾಡುತ್ತಿದ್ದರು.
ಕರೋನಾ ಸೈನಿಕರಂತೆ ಇವರೆಲ್ಲರ ಪರಿಶ್ರಮದಿಂದಲೇ ನಾವಿಂದು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ, ಅವರ ಋಣವನ್ನು ಸಮಾಜ ತೀರಿಸಬೇಕು ಎಂದರು.
ಕರೋನಾ ಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳ್ಳುವಂತೆ ಮಾಡಿದೆ ಆದರೆ ದೇಶದಲ್ಲಿ ತಹಬಂದಿಗೆ ಬರಲು ಕೇಂದ್ರ ಮತ್ತು ರಾಜ್ಯ ಸರ್ಕಾರವದ ಪ್ರಯತ್ನ, ಅದಕ್ಕೆ ಸಹಕಾರ ನೀಡಿದ ಕರೋನಾ ವಾರಿಯರ್ಸ್‍ರ ಪ್ರಾಮಾಣಿಕ ದುಡಿಮೆ ಕಾರಣ ಎಂದರು.ಕೋಲಾರ ಜಿಲ್ಲೆಯು ಇಂದು 3 ರಿಂದ 11 ಸ್ಥಾನಕ್ಕೆ ಇಳಿದಿದ್ದು ಮುಂದಿನ ದಿನಗಳಲ್ಲಿ ಕೋಲಾರವು ಕೊರೋನಾ ಮುಕ್ತಜಿಲ್ಲೆಯಾಗಿ ಹೊರಹೊಮ್ಮಬೇಕೆಂದು ಆಶಿಸಿದರು.
ಕಲ್ಯಾಣ ನಿಧಿಗೆ
2 ಲಕ್ಷ ನೆರವು
ಪತ್ರಕರ್ತರ ಕಲ್ಯಾಣ ನಿಧಿಗೆ 2 ಲಕ್ಷ ರೂ ದೇಣಿಗೆ ನೀಡಿದ ಅವರು, ಇದೇ ಸಂದರ್ಭದಲ್ಲಿ ಭವನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಗ್ರಂಥಾಲಯಕ್ಕೆ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ 10 ಲಕ್ಷ ನೆರವು ಒದಗಿಸುವ ಪತ್ರ ಹಸ್ತಂತರಿಸಿದರು.
ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ,ಪೊಲೀಸರು, ಪತ್ರಕರ್ತರು ನೀಡಿದ ಜಾಗೃತಿಯಿಂದ ಜಿಲ್ಲೆಯಲ್ಲಿ ಸೋಂಕಿತರು ಇಲ್ಲ, ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡವರನ್ನು ಗುರುತಿಸಿ ನೆರವು ನೀಡುವ ಮಾನವೀಯ ಹೃದಯಗಳೂ ಇರುವುದು ಸಂತಸ ತರಿಸಿದೆ ಎಂದರು.
ಪ್ರಾಮಾಣಿಕತೆಗೆ
ಉಳಿಗಾಲ ವಿಲ್ಲ
ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಎಂ.ಮುಭಾರಕ್, ಪವಿತ್ರವಾದ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕರಾಗಿ ಭ್ರಷ್ಟರನ್ನು ಹೊರಗೆಳೆದ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡ ನಿದರ್ಶನವನ್ನು ಅವರು ನೀಡಿ, ಪ್ರಾಮಾಣಿಕರ ಸಾವು ಪತ್ರಿಕಾ ರಂಗಕ್ಕೆ ಮತ್ತಷ್ಟು ಶಕ್ತಿ ನೀಡಿ ಭ್ರಷ್ಟರಿಗೆ ನಡುಕು ಹುಟ್ಟಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ನಾವು ಸಮಾಜದ ಸಮಸ್ಯೆ ಹೇಳುತ್ತೇವೆ ಆದರೆ ನಮ್ಮ ಸಮಸ್ಯೆ ಯಾರಿಗೂ ಗೊತ್ತಿಲ್ಲ, ಅನೇಕ ಪತ್ರಕರ್ತರು ಇಂದು ಸಂಕಷ್ಟದಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ ತಲಾ 25 ಅಕ್ಕಿ ವಿತರಿಸುತ್ತಿರುವುದಕ್ಕಾಗಿ ಎಂಎಲ್‍ಸಿ ಮನೋಹರ್ ಅವರಿಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಪತ್ರಕರ್ತರು ರಾತ್ರಿ,ಹಗಲೆನ್ನದೆ ಕೆಲಸ ಮಾಡುತ್ತಿದ್ದೇವೆ, ಕೋಲಾರಮ್ಮನ ಕೃಪೆಯಿಂದ ಜಿಲ್ಲೆಯಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದು ತಿಳಿಸಿ, ಜಿಲ್ಲೆಯ ಎಲ್ಲಾ 300 ಪತ್ರಕರ್ತರಿಗೂ ಅಕ್ಕಿ ನೀಡಿದ್ದಕ್ಕಾಗಿ ಮನೋಹರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಭವನಕ್ಕೆ ನೆರವು ಒದಗಿಸಿದ್ದಕ್ಕಾಗಿ ವಿಧಾನಪರಿಷತ್ ಸದಸ್ಯರಾದ ಸಿ.ಆರ್.ಮನೋಹರ್, ಆರ್.ಚೌಡರೆಡ್ಡಿ, ನಗರಸಭಾ ಸದಸ್ಯ ಬಿ.ಎಂ.ಮುಭಾರಕ್‍ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ವೈದ್ಯಕೀಯ ಕಾಲೇಜಿನ ಡಾ.ರಾಜಶೇಖರ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ತಾಪಂ ಸದಸ್ಯ ಮುದುವಾಡಿ ಮಂಜುನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಎ.ಜಿ.ವಿಜಯಕುಮಾರ್ ಮತ್ತಿತರರು ಹಾಜರಿದ್ದರು.